Tuesday, February 9, 2010

****ಮಾಸಿದ ಹಾದಿಯಲ್ಲಿ ಕಂಡ ಹೆಜ್ಜೆ ಗುರುತುಗಳು`*`*`*ಮಾಸಿದ ಹೆಜ್ಜೆಯ ಹುಡುಕುತ್ತಾ......

ನಾನು ನನ್ನೂರಿಗೆ ವರ್ಷದಲ್ಲಿ ಸುಮಾರು ನಾಲ್ಕು ಬಾರಿ ಹೋಗುತ್ತೇನೆ.ಏಪ್ರಿಲ್ ತಿಂಗಳಲ್ಲಿ ರಾಮೋತ್ಸವದ ವೇಳೆಯಲ್ಲಿ ಉತ್ಸವದಲ್ಲಿ ಭಾಗಿಯಾಗಿ ಊರವರನ್ನೆಲ್ಲಾ ಭೇಟಿಯಾಗಲು,ಮಳೆಗಾಲದಲ್ಲಿ ಮಳೆಯ ಹಾಡು ಕೇಳಲು,ಗಣಪತಿ ಹಬ್ಬದ ವೇಳೆಯಲ್ಲಿ ಮನೆಮಂದಿಯೆಲ್ಲಾ ಒಟ್ಟಿಗೆ ಸೇರಲು ಹಾಗೂ ಇನ್ನಾವುದಾದರೂ ಸಮಾರಂಭವಿದ್ದರೆ ಇಲ್ಲವೇ ಕಾರ್ತಿಕ ಮಾಸದಲ್ಲಿ ಒಂದೆರಡು ದಿನ ಊರಿನಲ್ಲಿದ್ದು ಬರುತ್ತೇನೆ.ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿಯ ಚಳಿಯಲ್ಲಿ ಊರಿಗೆ ಹೋಗಿ ಎಷ್ಟೋ ವರ್ಷವಾಗಿತ್ತು.ಚಳಿಯೇ ಇಲ್ಲವೆಂದು ಎಲ್ಲರೂ ಹೀಗಳೆಯುತ್ತಿದ್ದ ವೇಳೆಯಲ್ಲಿ ನಮ್ಮೂರಿನ ಚಳಿ ಎಲ್ಲರಿಗೂ ಸವಾಲು ಹಾಕಿತ್ತು.ಸಂಜೆ ನಾಲ್ಕಕ್ಕೇ ಚುಮುಚುಮು ಚಳಿ ಆರಂಭವಾಯಿತೆಂದರೆ ಬೆಳಿಗ್ಗೆ ಹತ್ತು ಗಂಟೆಯವರೆಗೂ ದಮ್ಮಯ್ಯಾ ಎಂದರೂ ಚಳಿ ಕಾಲ್ಕೀಳುತ್ತಿರಲಿಲ್ಲ.ಒಂದು ದಿನದ ಭೇಟಿಗೆಂದು ಹೋದವನು ಮನೆಯವರ ಬಲವಂತದ ಮೇರೆಗೆ ಇನ್ನೊಂದು ದಿನ ಉಳಿಯಬೇಕಾಯಿತು.ಕ್ಯಾಮೆರಾವನ್ನೂ ತೆಗೆದುಕೊಂಡು ಹೋಗಿರಲಿಲ್ಲ.ನಮ್ಮಣ್ಣನ ಮಗಳ ಪುಟ್ಟ ಡಿಜಿಟಲ್ ಕ್ಯಾಮೆರಾ ಸಧ್ಯಕ್ಕೆ ನನ್ನ ಸಂಗಾತಿಯಾಗಿತ್ತು.ಸಾಮಾನ್ಯವಾಗಿ ಮಳೆಗಾಲವನ್ನೇ ಹೆಚ್ಚಾಗಿ ನೋಡುತ್ತಿದ್ದ ನನಗೆ ಈ ವೇಳೆಯ ನನ್ನೂರಿನ ವಾತಾವರಣ ತೀರ ವಿಭಿನ್ನವಾಗಿಯೇ ಕಂಡು ವಿಭಿನ್ನ ಅನುಭವ ನೀಡಿತು.ಶಾಲಾ ದಿನಗಳಲ್ಲಷ್ಟೇ ಅನುಭವಿಸಿದ್ದ ಚಳಿಗಾಲದ ದಿನಗಳ ಹಳೆಯ ನೆನಪನ್ನು ಮರುಕಳಿಸುವಂತೆ ಮಾಡಿತ್ತು.ಕಾಫಿ ಹಣ್ಣು ಗಿಡದ ತುಂಬಾ ನಳನಳಿಸುತ್ತಿತ್ತು.ಊರಲ್ಲಿ ಅನೇಕರ ಮನೆಯ ಅಂಗಳದಲ್ಲಿ ಕಾಫಿ ಒಣಹಾಕಿದ್ದರು.ಈ ಬಾರಿಯ ಅಕಾಲಿಕ ಮಳೆ ಬಹು ಬೇಗನೆ ಕಾಫಿ ಕುಯ್ಲಿಗೆ ಬರುವಂತೆ ಮಾಡಿತ್ತು.ಹಣ್ಣು ಕಾಫಿಯ ಸುವಾಸನೆ (ಘಾಟು ವಾಸನೆ) ದಾರಿಯೆಲ್ಲೆಲ್ಲಾ ಹರಡಿತ್ತು.ಮನೆಯ ಹಿತ್ತಲಿನಲ್ಲಿ ನಮ್ಮ ಅಜ್ಜ ಹಾಕಿದ ಕಾಫಿ ಗಿಡಗಳು ಆರೈಕೆಯ ಕೊರತೆಯಲ್ಲೂ ಗಿಡದ ತುಂಬಾ ಹಣ್ಣನ್ನು ಹೊತ್ತುಕೊಂಡು ನಿಂತಿತ್ತು.ಪನ್ನೇರಳೆ ಹೂ ಕಚ್ಚಿತ್ತು.
ನೆನ್ನೆ ಊರಿಗೆ ಆನೆ ಬಂದಿತ್ತಂತೆ.ಕಾಡನೆ ಅಲ್ಲ! ಟಿಂಬರ್ ಆನೆ.ಅಂದರೆ ಮರದ ದಿಮ್ಮಿಗಳನ್ನು ತೋಟಗಳಿಂದ ಎಳೆದು ಲಾರಿಗೆ ತುಂಬಿಸಲು ಬರುವ ಕಮರ್ಷಿಯಲ್ ಉದ್ದೇಶದ ಸಾಕಾನೆಗಳು!ಮನೆಯ ಮುಂದೆ ಬಂದಾಗ ಬೆಲ್ಲ.ಅಕ್ಕಿ,ಕಬ್ಬು,ಬಾಳೆಹಣ್ಣು ಮೊದಲಾದವುಗಳನ್ನು ಕೊಡುವುದು ಮಲೆನಾಡಿಗರ ವಾಡಿಕೆ.ನಮ್ಮ ಅಣ್ಣ ನನ್ನ ಮಗಳು ಇಂಪುವಿಗೆ ಆನೆಯ ಬಗ್ಗೆ ಹೇಳುತ್ತಿದ್ದರು.ಇವಳು ದಿನವೆಲ್ಲಾ ಅದೇ ಗುಂಗಿನಲ್ಲಿದ್ದು ಬೆಳಿಗ್ಗೆಯಿಂದಲೂ ಅಪ್ಪಾ ಆನೆ ತೋರ‍್ಸು.....ಎನ್ನುತ್ತಲೇ ಇದ್ದಳು.ಸಂಜೆ ಆನೆ ಎತ್ತ ಹೋಯಿತೆಂದು ವಿಚಾರಿಸೋಣ ಹಾಗೆಯೇ ಮಗಳಿಗೂ ಉಚ್ಚಂಗಿ ದರ್ಶನ ಮಾಡಿಸೋಣವೆಂದು ಮಗಳೊಡನೆ ಹೊರಟೆ.ಆನೆ ಹೊಂಗಡಹಳ್ಳದ ಕಡೆಗೆ ಹೋಯಿತೆಂದು ಗೊತ್ತಾಯಿತು.ಮಗಳನ್ನು ಸಮಾಧಾನ ಪಡಿಸಲು ಆನೆ ಇಲ್ಲಿದೆ ಅಲ್ಲಿದೆ ಎಂದು ಸುಳ್ಳು ಹೇಳುತ್ತಾ ನಾನು ಓದಿದ ಪ್ರಾಥಮಿಕ ಶಾಲೆ,ದೊಡ್ಡ ಮಿಲ್,ಬಾಹು ಬ್ಯಾರಿ,ಚರಿಯರ ಮನೆ,ಗೌಡರ ಬೀದಿ ಎಲ್ಲವನ್ನೂ ತೋರಿಸುತ್ತಾ ಹಳೆ ಮಿಲ್ಲಿನ ಹಿಂಬದಿಯ ಮಠದ ಕೇರಿ ಹಾದಿ ಹಿಡಿದೆ.ಇಲ್ಲಿ ಹಿಂದೆ ಗೆಳೆಯ ಅಕ್ಬರನ ಮನೆಯಿತ್ತು.ಚಿಕ್ಕಂದಿನಲ್ಲಿ ಎಲ್ಲೆಲ್ಲಾ ಅದೆಷ್ಟು ಸಾರಿ ಓಡಾಡಿದ್ದವೋ ಏನೋ......(ಬದಲಾದ ಪರಿಸ್ಥಿತಿಯಲ್ಲಿ ಅಕ್ಬರನ ಕುಟುಂಬ ಮಂಗಳೂರಿನ ಕಡೆ ಹೋಗಿತ್ತು,ಈಗ ಎಲ್ಲಿದ್ದಾನೋ?ಹೇಗಿದ್ದಾನೋ?!)ಬಹಳ ದಿನಗಳ ಬಳಿಕ ಈ ಹಾದಿಯಲ್ಲಿ ಬಂದಿದ್ದೆನಾದ್ದರಿಂದ ನನಗೂ ಒಂಥರಾ ಹೊಸ ಅನುಭವ.ಸುತ್ತಲ ಕಾಡು,ತೆನೆಗೂಡಿದ ಬತ್ತದ ಗದ್ದೆಗಳು ಅದರ ಹಿಂಬದಿಗೆ ಎದ್ದು ನಿಂತ ಗವಿಬೆಟ್ಟ,ಜುಳುಜುಳು ಹರಿಯುತ್ತಿದ್ದ ಆನೆ ಕಾಲುವೆ ಇವೆಲ್ಲವೂ ನನ್ನಲ್ಲಿ ಏನನ್ನೋ ಕಳೆದು ಕೊಂಡದ್ದು ಮರಳಿ ಪಡೆದಂತೆ ಅವ್ಯಕ್ತ ಆನಂದ ಮೂಡಿಸಿತು.ನನ್ನ ಮಗಳಿಗಂತೂ ಮಗುವನ್ನು ಮೊದಲ ಬಾರಿಗೆ ಜಾತ್ರೆಗೆ ಕರೆದುಕೊಂಡು ಹೋದಂತಾ ಸಂಭ್ರಮ!ಕಾಡುಮೇಡು,ತೊರೆ,ಮರಗಿಡ,ಪ್ರಾಣಿಪಕ್ಷಿಗಳು,ಹುಲ್ಲುಗಾವಲು ಇವೆಲ್ಲವನ್ನ ಅಚ್ಚರಿಯ ಕಣ್ಣಲ್ಲಿ ನೋಡುತ್ತಿದ್ದಳು.ಗಂಡಿ ದಾಟಿ (ದನಗಳು ಒಳಹೋಗದಂತೆ, ಮನುಷ್ಯರು ಹೋಗಲಷ್ಟೇ ಸಾಧ್ಯವಾಗುವಂತೆ ಹಾಕಿದ ಮರದ ಗೇಟು) ಬತ್ತದ ಗದ್ದೆಗೆ ಕಾಲಿಟ್ಟಾಗ ಬತ್ತದ ತೆನೆಯ ಸುವಾಸನೆ ಕಾಡಿನ ಗಂಧಗಾಳಿಯಲ್ಲಿ ಸೇರಿ ವಿಶಿಷ್ಟ ಪರಿಮಳವನ್ನು ಎಲ್ಲೆಡೆ ಹರಡಿತ್ತು.ಒಂದರ ಹಿಂದೊಂದು ನಿಂತ ಬೆಟ್ಟಸಾಲುಗಳ ಹಿಂದಿನಲ್ಲಿ ಪುಷ್ಪಗಿರಿ ಗಾಂಭೀರ್ಯದಿಂದ ನಿಂತಿತ್ತು.
ಮುಂದುವರೆಯುವುದು......