Tuesday, December 23, 2008
ಸಾಗರಕಟ್ಟೆ ರೈಲ್ವೇ ಸ್ಟೇಷನ್.......
ಬಂತೇ ರೈಲು....
ಮೈಸೂರಿನಿಂದ ಬೆಳಿಗ್ಗೆ ಏಳುವರೆ ಗಂಟೆಗೆ ಹಾಸನಕ್ಕೆ ಹೊರಟ ರೈಲು ಹಳ್ಳಿಹಳ್ಳಿಗಳಲ್ಲಿ ನಿಲ್ಲಿಸುತ್ತಾ
ಗ್ರಾಮ್ಯಬದುಕಿನ ಕೊಂಡಿಯಂತೆ ಮುಂದೆ ಸಾಗುತ್ತಿತ್ತು.ಕೆಆರ್ಎಸ್ ರೈಲು ನಿಲ್ದಾಣ ದಾಟಿ ಹಚ್ಚಹಸಿರಿನ ಭತ್ತದ ಗದ್ದೆಗಳ ಸೊಬಗನ್ನು ರೈಲಿನ ಪ್ರಯಾಣಿಕರಿಗೆ ಉಣಬಡಿಸುತ್ತಾ ಚುಕ್ ಬುಕ್.......ಎಂದು ಮಂದಗತಿಯಲ್ಲಿ ಸಾಗುತ್ತಾ ಸಾಗರಕಟ್ಟೆಯಲ್ಲಿ ರೈಲು ನಿಂತಾಗ ರೈಲಿನ ಒಳಗೆ ಮಿಂಚಿನ ಸಂಚಾರ.ಹೊರಗೆ ‘ಹೂವೇ...’ ಎಂಬ ರಾಗ ತೇಲಿ ಬರುತ್ತಿತ್ತು.ಜೊತೆಗೆ ಟೊಮೆಟೋ,ಪಪ್ಪಾಯಿ,ಸೌತೆಕಾಯ್,ಬೀನಿಸು,ಮೂಲಂಗಿ,ಸೊಪ್ಪೇ,,, ಎಂಬ ಧ್ವನಿಗಳು ಸಂತೆಯೊಳಗೆ ನಿಂತ ಭಾವನೆ ಮೂಡಿಸುತ್ತಿದ್ದವು.ಇವೆಲ್ಲವೂ ಮಕ್ಕಳ ಧ್ವನಿಗಳು.
ಶಾಲೆಯ ಸಮವಸ್ತ್ರ ಧರಿಸಿದ್ದ ಮಕ್ಕಳು ತಟ್ಟೆ,ಬುಟ್ಟಿಯಲ್ಲಿ ಹಿಡಿದಿದ್ದ ಹಣ್ಣು,ಹೂವು,ತರಕಾರಿಗಳನ್ನು ರೈಲಿನ ಉದ್ದಕ್ಕೂ ಓಡಾಡುತ್ತಾ ಕಿಟಕಿಯ ಹತ್ತಿರ ಹಿಡಿದೊಡನೆ ಒಳಗಿನ ಪ್ರಯಾಣಿಕರು ಲಗುಬಗೆಯಿಂದ ಕೊಳ್ಳುತ್ತಿದ್ದರು.ತಾವು ತಂದ ಪದಾರ್ಥಗಳು ಖಾಲಿಯಾದ್ದೆ ತಡ ಈ ಮಕ್ಕಳು ಸಂತಸದಿಂದ ಓಡುತ್ತಿದ್ದರು.ರೈಲು ಹೊರಡುವ ವೇಳೆಗೆ ಈ ಮಕ್ಕಳೆಲ್ಲಾ ಮಂಗಮಾಯ! ತರಕಾರಿ ಮಾರುತ್ತಿದ್ದ ಮಕ್ಕಳು ಶಾಲಾ ಸಮವಸ್ತ್ರದಲ್ಲಿದ್ದದ್ದು ,
ಹೀಗೆ ಲಗುಬಗೆಯಲ್ಲಿ ತರಕಾರಿ ಮಾರಿ ಓಡುತ್ತಿದ್ದದ್ದು ನನಗೆ ಆಶ್ಚರ್ಯ ಉಂಟುಮಾಡಿತ್ತು.
ಇದಾಗಿ ಒಂದುವಾರಕ್ಕೆ ಸರಿಯಾಗಿ ಇದೇ ರೈಲಿನಲ್ಲಿ ಸಾಗರಕಟ್ಟೆಗೆ ಬಂದಿಳಿದೆ.ಇಂದೂ ಸಹ ಮಕ್ಕಳ ತರಕಾರಿ ವ್ಯಾಪಾರದ ಭರಾಟೆ ಜೋರಾಗಿಯೇ ಇತ್ತು.
ರೈಲು ಅತ್ತ ಹೋದ ಮೇಲೆ ಮಕ್ಕಳನ್ನು ಹಿಂಬಾಲಿಸಿದೆ.ರೈಲ್ವೇ ಸ್ಟೇಷನ್ ದಾಟಿದೊಡನೆ
ಅದಕ್ಕಂಟಿಕೊಂಡಂತಿದ್ದ ಶಾಲೆ ಆವರಣದೊಳಗೆ ಕಾಲಿಟ್ಟೆ.ಅಲ್ಲೆ ನಿಂತಿದ್ದ ಒಂದಷ್ಟು ಹುಡುಗರು ಒಕ್ಕೊರಲಿನಿಂದ ನಮಸ್ಕಾರ ಸಾ..... ಎಂದು ರಾಗವೆಳೆದು ನನಗೊಂದು ದೊಡ್ಡ ಸೆಲ್ಯೂಟ್ ಹೊಡೆದವು.ಯಾರೋ ಹೊಸ ಮೇಷ್ಟ್ರು ಬಂದಿದ್ದಾರೆ ಎಂದುಕೊಂಡು!
ಅವರನ್ನು ಕರೆದು ನೀವುಗಳು ತರಕಾರಿ ಮಾರುತ್ತಿದ್ದರಲ್ಲ ಅದರ ಬಗ್ಗೆ ಕೇಳಲು ಬಂದೆ ಎಂದೆ.ಮೊದಮೊದಲು ಮಾತನಾಡಲು ಹಿಂಜರಿದ ಮಕ್ಕಳಿಗೆ ನನ್ನ ಕ್ಯಾಮರಾ ತೆಗೆದು ಅವರ ಚಿತ್ರ ತೋರಿಸಿದಾಗ ಮಾತನಾಡ ತೊಡಗಿದರು.
ಸಾಗರಕಟ್ಟೆಯ ಸಿದ್ದೆಶಪ್ರಸಾದ,ಜಲಜ,ವೆಂಕಟೇಶ,ಮಾದೇಶ,ಸವಿತ,ದೊರೆ ಮೊದಲಾದ ಶಾಲಾಮಕ್ಕಳು ಬೆಳಗ್ಗೆ ಮನೆಮುಂದಿನ ತರಕಾರಿಗಳನ್ನು ಕುಯ್ದು ರೈಲ್ವೆ ನಿಲ್ದಾಣದಲ್ಲಿ ಮಾರಿ ದಿನಕ್ಕೆ ಸುಮಾರು ೧೫-೨೦ ರುಪಾಯಿ ಸಂಪಾದಿಸುತ್ತಾರೆ.ಬಂದಹಣ ಏನ್ಮಾಡ್ತೀರಿ..? ಎಂದರೆ ""ಮನೆಗೆ ಕೊಡ್ತೀವಿ ಸಾರ್...ಮನೆಗೂ ಸಹಾಯವಾಗುತ್ತೆ ನಮ್ಮ ಪುಸ್ತಕ ಪೀಜಿಗೂ ದುಡ್ಡಾಗುತ್ತೆ ”ಎನ್ನುತ್ತಾರಿವರು. ಒಂದೆರಡು ರೂಪಾಯಿ ಮಧ್ಯಾಹ್ನ ಅಂಗಡಿಯಲ್ಲಿ ತಿಂಡಿ ತಿನ್ನಲು ಇಸ್ಕತಿವಿ...ಎನ್ನುತ್ತಾ ನಗುತ್ತಾರೆ.ಇಲ್ಲಿನ ತರಕಾರಿಗಳು ತಾಜವಾಗಿರುವುದರಿಂದ,ಬೆಲೆಯೂ ಕಡಿಮೆ ಇರುವುದರಿಂದ ರೈಲಿನ ಪ್ರಯಾಣಿಕರು ಕೊಳ್ಳಲು ಮುಗಿಬೀಳುತ್ತಾರೆ.
ಪ್ರತಿನಿತ್ಯವೂ ಈ ರೈಲಿನಲ್ಲಿ ಪ್ರಯಾಣಿಸುವ ನಾಗರಾಜ ಸಾಗರಕಟ್ಟೆಯನ್ನು ಬಿಟ್ಟರೆ ಮುಂದಿನ ಯಾವುದೆ ರೈಲು ನಿಲ್ದಾಣಗಳಲ್ಲಿ ಹೀಗೆ ಮಕ್ಕಳು ತರಕಾರಿ ಮಾರುವುದು ಕಂಡುಬರುವುದಿಲ್ಲ ಎನ್ನುತ್ತಾರೆ.ಹಾಗಾದರೆ ಈ ಊರಿನ ವಿಶೇಷವಾದರೂ ಏನು?
ಇಲ್ಲಿ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತೆ ಶಾಲೆಯಿರುವುದರಿಂದ ಮಕ್ಕಳು ರೈಲುನಿಲ್ದಾಣದ ಮೂಲಕವೇ ಶಾಲೆಗೆ ತೆರಳುತ್ತಾರೆ.ಜೊತೆಗೆ ಇದೇ ವೇಳೆಗೆ ರೈಲು ಸಂಚರಿಸುವುದರಿಂದ ತಾವು ಬೆಳೆದ ಪದಾರ್ಥಗಳನ್ನು ಮಾರಾಟ ಮಾಡಲು ಅನುಕೂಲ.ಸಾಗರಕಟ್ಟೆ ಊರೂ ಸಹ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತಿರುವುದರಿಂದ ಈ ಊರ ಜನರಿಗೆ ರೈಲುನಿಲ್ದಾಣ ಪ್ರಮುಖ ಮಾರುಕಟ್ಟೆಯಾಗಿದೆ.ರಜಾದಿನಗಳಲ್ಲಿ ಮಕ್ಕಳ ಸೈನ್ಯವೆ ಇಲ್ಲಿ ವ್ಯಾಪಾರದಲ್ಲಿ ತೊಡಗಿರುತ್ತದೆ.
ರೈಲು ಇಲ್ಲಿ ನಿಲ್ಲುವ ಐದಾರು ನಿಮಿಷಗಳಲ್ಲಿ ಮಕ್ಕಳು ನಡೆಸುವ ಚುರುಕಿನ ಸಂತೆ ನೋಡಲು ಬಲು ಚೆಂದ.
ಅಶೋಕ ಉಚ್ಚಂಗಿ
Subscribe to:
Post Comments (Atom)
4 comments:
ನಿಮಗೂ ಶಿವಣ್ಣ ಥರ ಸಂತೆ, ರೈಲು, ಬಸ್ ಸ್ಟಾಪ್ ಎಲ್ಲಾ ಭಾಳ ಪ್ರೀತಿ ಅನಿಸುತ್ತೆ..ಚೆನ್ನಾಗಿದೆ ಬರಹ. ಇದೇ ನಿಜವಾದ ಬದುಕು
-ತುಂಬುಪ್ರಿತಿ,
ಚಿತ್ರಾ
ಅಶೋಕ್.....
ಇದು ಶಿವು ರವರ ಬ್ಲೋಗ್ ಅಂದು ಕೊಂಡೆ...
ನಿಮ್ಮ ಬರಹ ಸರಳವಾಗಿ..ಚಂದವಾಗಿದೆ...
ಖುಷಿಯಾಯಿತು....
ಫೋಟೊಗಳು ಚೆನ್ನಾಗಿವೆ..
ಅಭಿನಂದನೆಗಳು...
ಆಶೋಕ್,
ತುಂಬಾ ಚೆನ್ನಾಗಿದೆ. ನನಗೂ ಇಂಥವೇ ಇಷ್ಟ...ಮುಂದುವರಿಸಿ...ಈ ರೀತಿ ಹೊಸತನ್ನು ಹುಡುಕಿ ತನ್ನಿ...ನಮಗೆಲ್ಲಾ ಹಂಚಿ....
"ಮನೆಗೆ ಕೊಡ್ತೀವಿ ಸಾರ್...ಮನೆಗೂ ಸಹಾಯವಾಗುತ್ತೆ ನಮ್ಮ ಪುಸ್ತಕ ಪೀಜಿಗೂ ದುಡ್ಡಾಗುತ್ತೆ" ಎನ್ನುತ್ತಾರಿವರು. ಒಂದೆರಡು ರೂಪಾಯಿ ಮಧ್ಯಾಹ್ನ ಅಂಗಡಿಯಲ್ಲಿ ತಿಂಡಿ ತಿನ್ನಲು ಇಸ್ಕತಿವಿ... ಎನ್ನುತ್ತಾ ನಗುತ್ತಾರೆ.
ಮನ ಮುಟ್ಟಿತು.. ಹೀಗೇ ಬರೆಯುತ್ತಿರಿ..
Post a Comment