Tuesday, February 3, 2009
**** ಸೊಬಗಿನ ಜಾನಪದ ಜಾತ್ರೆಗಳು....
ಹಳ್ಳಿ ಜಾತ್ರೆಗಳಲ್ಲೊಂದು ಸುತ್ತು....
ನಾನು ಚಿಕ್ಕಂದಿನಲ್ಲಿ ನೋಡಿದ ಜಾತ್ರೆಗಳೆಂದರೆ ಕೊಂಗಳ್ಳಿ ಜಾತ್ರೆ,ಗುಡುಗಳಲೆ ಜಾತ್ರೆ,ಟೆಂಪಲ್ ಜಾತ್ರೆ...ಇತ್ಯಾದಿ.ಈ ಊರುಗಳು ಮಲೆನಾಡಿನ ಮಡಿಲಲ್ಲಿವೆ.ಮಲೆನಾಡಿನ ಸಕಲೇಶಪುರ ತಾಲೋಕಿನ ಕೊಂಗಳ್ಳಿ,ಕೊಡಗು ಜಿಲ್ಲೆಯ ಶನಿವಾರಸಂತೆಯ ಸಮೀಪದ ಗುಡುಗಳಲೆ ಜಾತ್ರೆಗಳು ನಮ್ಮ ಪ್ರದೇಶದಲ್ಲಿ ದೊಡ್ಡ ಜಾತ್ರೆಗಳು.
ಸಾಮಾನ್ಯವಾಗಿ ಮಲೆನಾಡಿನ ಜಾತ್ರೆಗಳಲ್ಲಿ ಉತ್ಸವ,ಸುಗ್ಗಿಗಳಿಗೆ ಪ್ರಾಧಾನ್ಯ.ನಾನು ನೋಡಿದ ಕೊಂಗಳ್ಳಿ ಜಾತ್ರೆಯಲ್ಲಿ ಕಾಡಿನ ನಡುವಿರುವ ದೇಗುಲದಲ್ಲಿ ಪೂಜೆ ಸಲ್ಲಿಸಿ,ಅಥವಾ ಹರಕೆ ತೀರಿಸಿ ದೇಗುಲದ ಸಮೀಪದಲ್ಲಿನ ಡೇರೆಗಳಲ್ಲಿ ಸಿಗುತ್ತಿದ್ದ ಪೀಪಿ,ಬಲೂನು,ಸಿಹಿತಿಂಡಿಗಳು,ಬತ್ತಾಸು,ಪುರಿ,ಕಾರಾಸೇವಿಗೆ,ಬಟ್ಟೆ,ಚಪ್ಪಲಿಗಳನ್ನು ಜಾತ್ರೆಗೆ ಬಂದ ಜನ ಕೊಳ್ಳುತ್ತಿದ್ದರು.ಕಾಡಿನ ನಡುವೆ ನಿರ್ಜನ ದೇಗುಲದೆದುರು ವರ್ಷದಲ್ಲೊಮ್ಮೆ ಸುಮಾರು ಒಂದು ಸಾವಿರ ಜನ ಒಟ್ಟಿಗೆ ಸೇರಿ ಜಾತ್ರೆಯಾಗುತ್ತಿತ್ತು.ಮಲೆನಾಡಿನ ಈ ಜಾತ್ರೆ ಬಯಲುಸೀಮೆಯ ವಾರದ ಸಂತೆಗೆ ಸಮವೆನಿಸುತ್ತಿತ್ತು ಎಂದರೆ ತಪ್ಪಾಗಲಾರದು.ಇನ್ನು ಗುಡುಗಳಲೆ ಜಾತ್ರೆ ಒಂದುವಾರಗಳ ಕಾಲ ನಡೆದು ಆಕರ್ಷಕವೆನಿಸುತ್ತಿತ್ತು.ಈ ವೇಳೆಯಲ್ಲಿ ಸರ್ಕಸ್,ನಾಟಕಗಳು,ಸಂಚಾರಿ ಸಿನಿಮಾಗಳ ಪ್ರದರ್ಶನವಿರುತ್ತಿತ್ತು.ರಾಟಾಳೆ,ತೊಟ್ಟಿಲುಗಳು ಮಕ್ಕಳಿಗೆ ಪ್ರಿಯವಾಗಿತ್ತು.ಇತ್ತೀಚೆಗೆ ಇವು ತಮ್ಮ ಹಿಂದಿನ ಸೊಗಡನ್ನು ಕಳೆದುಕೊಂಡಿವೆ.
ಇಂದಿನ ದಿನಗಳಲ್ಲಿ ಜಾತ್ರೆಗಳು ನಮ್ಮ ಜನಪದರಿಂದ ದೂರಾಯಿತೇನೋ ಎಂಬ ಭಾವನೆ ನನ್ನದಾಗಿತ್ತು.ಆದರೆ ಬಯಲು ಸೀಮೆಯ ಕೆಲವು ಹಳ್ಳಿ,ಪಟ್ಟಣಗಳಲಿ ಜಾತ್ರೆಯ ಸೊಗಡು ಇನ್ನೂ ಮಾಸಿಲ್ಲ.ಹಿಂದಿನ ವೈಭವ ಈಗಿಲ್ಲವಾದರೂ ತಕ್ಕ ಮಟ್ಟಿಗೆ ‘ಜಾನಪದ ಜಾತ್ರೆಗಳು’ ಎನಿಸಿಕೊಳ್ಳುತ್ತವೆ.
ನಿನ್ನೆ ರಥಸಪ್ತಮಿಯ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ರಥೋತ್ಸವವಿತ್ತು.ಇಂದು ಅಲ್ಲಿ ಜಾತ್ರೆಯೂ ಸಹ.
ಇಲ್ಲಿನ ಜಾತ್ರೆ ನೋಡಿದಾಗ ಮನಸ್ಸಿಗೆ ನೆಮ್ಮದಿಯಾಯಿತು.ಕಾರಣ ನಮ್ಮ ಜನಪದರ ಆಟಗಳು,ಆಚರಣೆಗಳು,ತಿಂಡಿತಿನಿಸುಗಳು,ಜಾತ್ರೆ ವಾತಾವರಣ ಇನ್ನೂ ಹಾಗೆ ಉಳಿದಿದೆಯಲ್ಲಾ ಎಂದು ಸಂತಸವಾಯಿತು.
ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇಗುಲದ ಹಾದಿಯ ಇಕ್ಕೆಲದಲ್ಲಿ ಮತ್ತು ಪಕ್ಕದ ವಿಶಾಲ ಅಂಗಳಲ್ಲಿ ಭರ್ಜರಿಯಾಗಿ ಜಾತ್ರೆ ನಡೆಯುತ್ತಿತ್ತು.ಗತಕಾಲದ ನೆನಪಿಗೆ ಸಾಕ್ಷಿಯಂತಿದ್ದ ಈ ಜಾತ್ರೆಯಲ್ಲಿ ಒಂದು ಸುತ್ತುಬಂದು ಇಲ್ಲಿನ ವಿಶೇಷತೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆ.ಮಾಸಿದ ನೆನಪಿಗೆ ಹೊಳಪು ನೀಡಿದೆ.
ಪಿಂಗಾಣಿಯ ಭರಣಿ,ಕುಡಿಕೆ,ಜಾಡಿ,ಮಡಿಕೆ-ಕುಡಿಕೆಗಳು,ಟೇಫು-ರಿಬ್ಬನ್ನುಗಳು,ಮಹಿಳೆಯರ ಅಲಂಕಾರಿಕ ವಸ್ತುಗಳು,ಮಕ್ಕಳ ಆಟದ ಸಾಮಾನುಗಳು,ಕಲ್ಲಂಗಡಿ,ಕಬ್ಬು,ಸೊಪ್ಪಿನ ಕಡಲೆ,ಬಣ್ಣಬಣ್ಣದ ಮಿಠಾಯಿಗಳು,ಬೆಂಡುಬತ್ತಾಸುಗಳು,ಹಾವಾಡಿಗರು,ಗಿಣಿಶಾಸ್ತ್ರದವರು,
ಕೋಲೆಬಸವರು,ವಿಧವಿಧವಾದ ಹಳ್ಳಿ ಗ್ಯಾಂಬ್ಲಿಂಗ್ ಕ್ರೀಡೆಯಲ್ಲಿ ಮುಳುಗಿಹೋಗಿದ್ದ ಹಳ್ಳಿಗರು,ಮಕ್ಕಳು.....ಹೀಗೆ ಗ್ರಾಮ್ಯ ಪ್ರದೇಶದವರಿಗೆ ಇಷ್ಟವಾಗುವ ಪಟ್ಟಣಿಗರಿಂದ ‘ಲೋಕಲ್ ’ ಎಂದೆನಿಸಿಕೊಳ್ಳುವ ಈ ಜಾತ್ರೆಯ ಸವಿಯನ್ನು ಈ ವ್ಯಕ್ತಿಯಂತೆಯೇ ನಾನೂ ನನ್ನ ಮಗಳನ್ನು ಭುಜದ ಮೇಲೆ ಕೋರಿಸಿಕೊಂಡು ಸುತ್ತಿ ಸವಿದೆ.
ಆದರೆ ನನ್ನ ಮಗಳಿಗೆ ಎಷ್ಟು ಹೇಳಿದರೂ ಅವಳು ಇದನ್ನು ಜಾತ್ರೆ ಎನ್ನುತ್ತಿಲ್ಲ.......ಎಗ್ಜಿಬಿಸನ್...ಎಂದು ಮುದ್ದುಮುದ್ದಾಗಿ ಉಲಿಯುತ್ತಾಳೆ....
ಜಾತ್ರೆ ಚಿತ್ರಗಳು.
ಜನ ಮರುಳೋ....ಜಾತ್ರೆ ಮರುಳೋ......
ಬಳೆ ಎಸೆದು....ಬಲೆ ಹಾಕು...!
ಮಿಠಾಯಿ
ಅಂಗಡಿ.......
Subscribe to:
Post Comments (Atom)
9 comments:
ಆಶೋಕ್,
ನಿಮ್ಮೂರಿನ ಜಾತ್ರೆಗಳ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ...
ಶ್ರೀರಂಗಪಟ್ಟಣದ ಜಾತ್ರೆ ವಿಶೇಷ ಚೆನ್ನಾಗಿದೆ....ಅದಕ್ಕೆ ಸಂಭಂದ ಪಟ್ಟ ಫೋಟೊಗಳು ತುಂಬಾ ಚೆನ್ನಾಗಿವೆ....
ಕೊನೆಯಲ್ಲಿ ನಿಮ್ಮ ಮಗಳ ಮಾತನ್ನು ಒಪ್ಪಿಕೊಳ್ಳಿ...ಅವರು ನಮ್ಮ ಮುಂದಿನ ಪೀಳಿಗೆ ತಾನೆ....!
ಅಶೋಕ್...
ನಮ್ಮನ್ನೆಲ್ಲ ಪುಕ್ಕಟೆಯಾಗಿ ಜಾತ್ರೆಗೆ ಕರೆದೊಯ್ದಿದ್ದೀರಿ..
ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ...
ಸಂಗಡ ಫೋಟೊಗಳು...
ಎಲ್ಲಾ ಚೆನ್ನಾಗಿತ್ತು...
ನಿಮ್ಮ ಮಗಳ ಮಾತು .. "ಸಿಕ್ಕಾಪಟ್ಟೆ ನಗು ತರಿಸಿತು"
ಕಂಪ್ಯೂಟರ್ ಕಾಲದ ಮಕ್ಕಳು ಅವು..
ಜನ ಮರಳೋ..
ಜತ್ರೆ ಮರಳೋ..
ಸ್ವಾಮಿ ನಾನು "ಇಟ್ಟಿಗೆ ಸಿಮೆಂಟಿನವ"
ಮರಳು ಅಂದ್ರೆ."ಸ್ಯಾಂಡ್" ಅಂದ್ಕೊಂಡೆ
ಅಂದಹಾಗೆ..
"ಜಗತಿಕ ಆರ್ಥಿಕ ಮುಗ್ಗಟ್ಟಿನ ಬಿಸಿ" ಇರಲಿಲ್ಲವೋ..?
ಚಂದವಾದ ಲೇಖನಕ್ಕೆ ಧನ್ಯವಾದಗಳು..
:೦)ಶಿವು ಧನ್ಯವಾದಗಳು.ಹೌದು ಈಗಿನ ಕಾಲದ ಮಕ್ಕಳು ನೂರೆಂಟು ತರದ ಎಕ್ಸಿಭಿಷನ್ ನೋಡಿ ಜಾತ್ರೆಯ ಪರಿಕಲ್ಪನೆಯೇ ಅವಕ್ಕಿರುವುದಿಲ್ಲ...ಅವುಗಳದ್ದು ತಪ್ಪಲ್ಲ.
:೦)ಪ್ರಕಾಶ್ ಧನ್ಯವಾದಗಳು.ಹಳ್ಳಿಗರು ನಿಜಕ್ಕೂ ಅದೃಷ್ಟವಂತರು ಸ್ವಾಮಿ,ತಮ್ಮ ಇತಿಮಿತಿ ತಿಳಿದು ಬದುಕುತ್ತಾರೆ.ಹೇಳಿಕೇಳಿ ಇದು ಹಳ್ಳಿ ಜಾತ್ರೆ,ಜಗತಿಕ ಆರ್ಥಿಕ ಮುಗ್ಗಟ್ಟಿನ ಬಿಸಿ ತಟ್ಟೋದಾದ್ರು ಹೇಗೆ?ಇಲ್ಲಿ ಎಲೆಕ್ಟಾನಿಕ್ ವಸ್ತುಗಳು,ಕಟ್ಟಡ ಸಾಮಗ್ರಿಗಳು ಸಿಗುವುದಿಲ್ಲವಲ್ಲಾ ಹಾಗೆಯೇ ಕೊಳ್ಳಬಾಕರಿಗೆ ಮಾರುಕಟ್ಟೆಯೂ ಇದಲ್ಲವಲ್ಲಾ.ಆದ್ದರಿಂದ ಯಾವುದೇ ಬಿಸಿ ಇಲ್ಲದೆ ಬಿಸಿಲಿನಲ್ಲೂ ಜಾತ್ರೆ ಹಿತವಾಗಿತ್ತು.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
ನಿಮ್ಮ ಬ್ಲಾಗ್ ನೋಡುತ್ತಿದ್ದೇನೆ.
ನಿಮ್ಮ ಮೇಲ್ ವಿಳಾಸ ನೀಡಿ: aaghavam@gmail.com
ವಿಳಾಸ ತಪ್ಪಾಗಿದೆ. ಇದು ಸರಿ: raaghavam@gmail.com
ಉತ್ತಮ ಮಾಹಿತಿ ನೀಡಿದ್ದೀರಿ ಹಾಗು ತುಂಬ ಉತ್ತಮವಾದ ಬರಹ
ಅಶೋಕ್...
ಬಹಳ ದಿನಗಳಿಂದ ಬ್ಲಾಗ್ ಖಾಲಿ ಇಟ್ಟಿದ್ದೀರಿ..
ಅತೀ ಶೀಘ್ರವಾಗಿ ಕ್ರಮ ತೆಗೆದು ಕೊಳ್ಳಿ..
ಇಲ್ಲವಾದಲ್ಲಿ..
ನಿಮ್ಮನೆ ಮುಂದೆ "ಧರಣಿ ಸತ್ಯಾಗ್ರಹ" ಮಾಡಬೇಕಾಗುತ್ತದೆ...!
ಉಚ್ಚಂಗಿ ಸರ್ ನಮಸ್ಕಾರ. ನಿಮ್ಮೂರಿನ ಜಾತ್ರೆ ಕುರಿತು ಚೆನ್ನಾಗೇ ಹೇಳಿದ್ದೀರಿ. ನಂಗೂ ನಮ್ಮೂರಿನ ಜಾತ್ರೆ ಬಗ್ಗೆ ಬರೆಯೋಣ ಅನಿಸಿದೆ. ಸದ್ಯದಲ್ಲೇ ಬರೇತೀನಿ. ಪುರುಸೋತ್ತು ಇದ್ರೆ ಧರಿತ್ರಿ ಕಡೆ ಬಂದು ಹೋಗಿ
-ಧರಿತ್ರಿ
ಅಶೋಕ್
ನಿಮ್ಮ ಮುದ್ದು ಮಗಳ ಎಗ್ಸಿಬಿಸನ್ ನಿಜಕ್ಕೂ ಎಲ್ಲ ಮುದ್ದು ಮನಗಳ ಬಲು ಮೆಚ್ಚಿನ ತಾಣ. ನಾವಂತೂ ವರ್ಷಕ್ಕೊಮ್ಮೆ ಬರುತ್ತಿದ್ದ ಜಾತ್ರೆಗೆ ಜಾತಕಗಳಂತೆ ಕಾಯುತ್ತಿದ್ದೆವು. ವರ್ಷವಿಡೀ ಕೂಡಿಟ್ಟ ಪಾಕೆಟ್ ಮನಿಯನ್ನ ಜಾತ್ರೆಗೆ ಅಪ್ಪ-ಅಮ್ಮ ಜಾತ್ರೆಗೇ ಅಂತಲೇ ಕೊಡುತ್ತಿದ್ದ ಖರ್ಚಿನ ಜತೆಗೆ ಸೇರಿ ಮಜಾನೋ ಮಜಾ...
ನಿಮ್ಮ ಚಿತ್ರ ಮತ್ತು ಲೇಖನ ಚನ್ನಾಗಿ ಮೂಡಿದೆ...ನನ್ನ ಬ್ಲಾಗಿಗೂ ಒಮ್ಮೆ ಭೇಟಿ ನೀಡಿ...
Post a Comment