Wednesday, December 30, 2009
ನಾನು ವಿಷ್ಣುವರ್ಧನ್ ಅವರನ್ನು ನೋಡಿದ್ದು...
"ಕೋಟಿಗೊಬ್ಬ"
ಸುಮಾರು ಈಗ್ಗೆ ಹನ್ನೊಂದು ವರ್ಷದ ಹಿಂದಿನ ಮಾತು.ನಾನಾಗ ಮೈಸೂರಿನ ಅಗ್ರಹಾರ ವೃತ್ತದಲ್ಲಿರುವ ಫಿಲಿಪ್ಸ್ ಸರ್ವಿಸ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದೆ.ಬೆಳಿಗ್ಗೆ ಒಂಭತ್ತು ನಲವತ್ತರ ಸಮಯ.ರಸ್ತೆಯಲ್ಲಿ ಗದ್ದಲ ಕೇಳಿ ಹೊರಬಂದಾಗ ಯಾವುದೋ ಶೂಟಿಂಗ್’ಗೆ ಸಿನಿಮಾ ಮಂದಿ ಅಣಿಯಾಗುತ್ತಿದ್ದರು.ಶೂಟಿಂಗ್ ನೋಡಲು ಮಾಮೂಲಿನಂತೆ ಭಾರಿ ಜನಸ್ತೋಮ.ಮೋದಲನೇ ಅಂತಸ್ತಿನಲ್ಲಿ ನಮ್ಮ ಕಛೇರಿ ಇದ್ದದ್ದರಿಂದ ಇಡೀ ರಸ್ತೆಯ ವಿದ್ಯಮಾನಗಳ ಪಕ್ಷಿನೋಟ ನನಗೆ ಸಿಗುತ್ತಿತ್ತು.ವಿಷ್ಣುವರ್ಧನ್ ಬಂದಿದ್ದಾರೆ ಎಂದು ಪಕ್ಕದ ಕಟ್ಟಡದಿಂದ ಯಾರೋ ಕೂಗಿ ಹೇಳಿದರು.ನಾನಂತೂ ವಿಷ್ಣು ಸಾರ್ ಅವರ ದೊಡ್ಡ ಅಭಿಮಾನಿ.ಅವರನ್ನು ಇಲ್ಲಿಯವರಗೆ ನೋಡಿರಲಿಲ್ಲ.ಇಂತಹ ಅವಕಾಶ ಬಾಗಿಲಲ್ಲೇ (ಆಫೀಸ್ ಬಾಗಿಲಲ್ಲೇ!) ಬಂದು ನಿಂತಿರುವಾಗ ಮಿಸ್ ಮಾಡಿಕೊಳ್ಳಲಾದೀತೇ?ಅದೂ ಒಂದನೇ ಅಂತಸ್ತಿನಲ್ಲಿ ಆರಾಮ ನಿಂತು ಚಿತ್ರೀಕರಣವನ್ನು ತೀರಾ ಹತ್ತಿರದಲ್ಲೇ ನೋಡುವ ಅವಕಾಶ.ಕಾರ್ಯ ನಿಮಿತ್ತ ಮಡಿಕೇರಿಗೆ ಹೋಗಬೇಕಾದವನು ಶೂಟಿಂಗ್ ನೋಡಿಯೇ ಹೋಗಲು ತೀರ್ಮಾನಿಸಿದೆ.ಒಂದು ಕ್ಯಾಮೆರಾ ನೂರೊಂದು ಗಣಪತಿ ದೇಗುಲದ ಮುಂದೆ,ಇನ್ನೊಂದು ನಮ್ಮ ಆಫೀಸಿನ ಪಕ್ಕದ ಕಟ್ಟಡದಲ್ಲಿ,ಮಗದೊಂದು ಅಗ್ರಹಾರ ವೃತ್ತದಲ್ಲಿನ ಕಟ್ಟಡದಲ್ಲಿತ್ತು.ನಮ್ಮ ಆಫೀಸಿನ ಎದಿರಿಗೆ ಮೈಕ್ ಹಿಡಿದು ಕೌಬಾಯ್ ಟೋಪಿ ಧರಿಸಿದ ವ್ಯಕ್ತಿ ನಿರ್ದೆಶಕ ದಿನೇಶ್ ಬಾಬು ಎಂಬುದೂ ಗೊತ್ತಾಯಿತು.ಆದರೆ ನನ್ನ ಮೆಚ್ಚಿನ ವಿಷ್ಣು ಎಲ್ಲಿ?ಅಭಿಮಾನಿಗಳ ದಂಡು ಪೋಲೀಸರನ್ನೂ ಲಕ್ಕಿಸದೇ ಕಾರೊಂದರ ಸುತ್ತಾ ಜೇನುಹುಳುವಿನಂತೆ ಮುತ್ತಿತ್ತು.ಕಾರಿನ ಕಪ್ಪು ಗಾಜಿನಲ್ಲಿ ಇಣುಕಿ ನೋಡುತ್ತಿತ್ತು.ಚಿತ್ರೀಕರಣ ಹೇಗೆ ನಡೆಯುತ್ತೆ ಎಂಬ ಆಸಕ್ತಿಯಿದ್ದ ನನಗೆ ಇದೊಂದು ದೊಡ್ಡ ಅನುಭವ ಕಲ್ಪಿಸಿತ್ತು.ಈ ಜನರ ನೂಕುನುಗ್ಗಲಿನಲ್ಲಿ ಶೂಟಿಂಗ್ ಮಾಡುವುದು ಸುಲಭದ ಕೆಲಸವೇನೂ ಅಲ್ಲ.ಇಷ್ಟೆಲ್ಲಾ ಶ್ರಮವಹಿಸಿ ಶೂಟ್ ಮಾಡಿದ ಬಳಿಕ ಅದು ಸರಿಹೋಗದಿದ್ದರೆ ನೀರಲ್ಲಿ ಹೋಮ ಮಾಡಿದಂತೆ ಎಂದು ಆಗ ನನಗನ್ನಿಸಿತ್ತು.ನಿರ್ದೇಶಕ,ನಟ,ಕ್ಯಾಮೆರಾಮನ್ ಎಲ್ಲರಿಗೂ ಒಂದುರೀತಿಯ ಚಾಲೆಂಜ್ ಇದು.ದಿನೇಶ್ ಬಾಬು ಎಲ್ಲಾ ಕಡೆ ತಿರುಗಿ ರೆಡೀ ಎಂಬ ಸಂಕೇತ ನೀಡುತ್ತಿದ್ದರು.ಇನ್ನೇನು ವಿಷ್ಣು ಕಾರಿನಿಂದ ಇಳಿಯುತ್ತಾರೆ ಎಂದು ಎಲ್ಲರೂ ನೋಡುತ್ತಿದ್ದಾಗ ಕಾರಿನ ಸ್ವಲ್ಪದೂರದಲ್ಲಿ ನಿಂತಿದ್ದ ಪೋಲೀಸ್ ಜೀಪಿನ ಹಿಂದಿನ ಸೀಟಿನಿಂದ ವಿಷ್ಣು ಇಳಿದರು! ಕಾರಿನ ಕಡೆ ಗಮನ ಹರಿಸಿದ್ದ ಜನ ಬೆಸ್ತು ಬಿದ್ದು ಹೋ...ಎನ್ನುತ್ತಾ ವಿಷ್ಣು ಕಡೆ ಓಡತೊಡಗಿದರು.ಆಗ ಪೋಲಿಸ್ ವೇಷದಲ್ಲಿದ್ದ ಸಹ ಕಲಾವಿದರು ಲಾಠೀ ಜಾರ್ಜ ಮಾಡುವಂತೆ ಬೆತ್ತವನ್ನು ಜನರ (ಇದರಲ್ಲಿ ಸಿನಿಮಾ ತಂಡವೂ ಇತ್ತು) ಕಾಲಬಳಿ ಬಡಿಯುತ್ತಿದ್ದರು.ವಿಷ್ಣು ಸಾರ್ ಅವರನ್ನು ಅರೆಸ್ಟ ಮಾಡುವ ದೃಶ್ಯ ಇದೆಂದು ಆನಂತರ ತಿಳಿಯಿತು.ಸಹಜ ನಟ ಸಾಹಸಸಿಂಹ ಇಲ್ಲಿನ ಅಲ್ಲೋಲಕಲ್ಲೋಲ ವಾತಾವರಣದಲ್ಲಿ ಒಂದುಚೂರು ವಿಚಲಿತರಾಗದೆ ಏನಿದೆಲ್ಲಾ...?ದಯವಿಟ್ಟು ನನ್ನನ್ನು ಪೋಲೀಸರು ಅರೆಸ್ಟ್ ಮಾಡಿ ಕರೆದು ಕೊಂಡು ಹೋಗಲು ಅವಕಾಶ ಮಾಡಿಕೊಡಿ ಎಂದು ಜನರಲ್ಲಿ ಕೇಳಿಕೊಳ್ಳುವಂತೆ ಅದ್ಭುತವಾಗಿ ಅಭಿನಯಿಸಿದರು.ದಿನೇಶ್ ಬಾಬು ಓಕೆ ಎಂದರು.ಜನಜಂಗುಳಿಯ ಮಧ್ಯೆ ಟೊಮೆಟೋ ಹಣ್ಣಿನಂತೆ ಕೆಂಪಗಿದ್ದ ಕನ್ನಡನಾಡಿನ ಸುಂದರ ನಟನನ್ನು ಸಮೀಪದಿಂದ ನೋಡುವ ಅವಕಾಶ ನನ್ನದಾಗಿತ್ತು.ಅವರ ಮನೋಜ್ಞ ಅಭಿನಯದ ಪರಿಚಯವಾಗಿ ಈ ಕಲಾವಿದನ ಮೇಲೆ ಇನ್ನೂ ಹೆಚ್ಚಿನ ಗೌರವ ನನ್ನಲ್ಲಿ ಮೂಡಿತು.
ಮೈಸೂರಿನ ಹೆಮ್ಮೆಯ ಪುತ್ರ
ಮೈಸೂರಿನ ಚಾಮುಂಡಿಪುರಂನಲ್ಲಿ ಹುಟ್ಟಿ ಮೈಸೂರಿಗರಾಗಿ (ಮೂಲತಃ ಮೇಲುಕೋಟೆಯವರಂತೆ) ತಮ್ಮ ಬಹುತೇಕ ಚಿತ್ರಗಳನ್ನು ಮೈಸೂರಿನಲ್ಲೇ ಚಿತ್ರೀಕರಣ ಮಾಡಿಸಿದವರು ನಮ್ಮ ವಿಷ್ಣು.ಆಗಾಗ ಮೈಸೂರಿಗೆ ಬರುತ್ತಿದ್ದ ವಿಷ್ಣು ಅನೇಕ ಸಂದರ್ಭದಲ್ಲಿ ಮೈಸೂರಿನ ಸೊಗಡಿನ ಮೇಲೆ ತಮಗಿರುವ ಪ್ರೀತಿ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.ವಿಷ್ಣು ಮೈಸೂರಿನಲ್ಲೇ ನಿಧನ ಹೊಂದಿದ್ದು ವಿಧಿಯಾಟವೇ ಸರಿ.ಮೈಸೂರಿನ ಹೆಮ್ಮೆಯ ವಿಷ್ಣು ಅವರಿಗೆ ಇಡೀ ಮೈಸೂರೇ ಸ್ವಯಂಪ್ರೇರಣೆಯಿಂದ ಗೌರವ ಸಲ್ಲಿಸುತ್ತಿದೆ.
ವಿಷ್ಣು ಮಾಡಿದ ತಪ್ಪು!
ಇವರು ಬೆಂಗಳೂರಿನ ಜಯನಗರಲ್ಲಿ ನೆಲಸಿ ಅಲ್ಲಿನ ಜನಸಾಮಾನ್ಯರೊಳಗೆ ಒಬ್ಬರಾಗಿ ಬದುಕುತ್ತಾ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದವರು.ಅತ್ಯಂತ ಸರಳ,ಸಜ್ಜನಿಕೆಯ,ಸುಸಂಸ್ಕೃತ ಹಾಗೂ ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆ ನೀಡಿ ಎಲ್ಲಾ ಕಲಾವಿದರೋಟ್ಟಿಗೆ ತಾನೊಬ್ಬನಾಗಿ,ಶಿಸ್ತಿಗೆ ಹೆಸರಾಗಿ,ಯಾವುದೇ ಜಾತಿ,ರಾಜಕೀಯ ಪಕ್ಷಕ್ಕೆ ಅಂಟಿಕೊಳ್ಳದೆ,ಸಮಕಾಲೀನ ಕಲಾವಿದರನ್ನು ತುಳಿಯದೇ,ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ವಿಷ್ಣುವರ್ಧನ್ ಅವರು ತಮ್ಮ ಜೀವನದಲ್ಲಿ ಒಂದೇ ಒಂದು ದೊಡ್ಡ ತಪ್ಪು ಮಾಡಿದರು..... ಅದು ನಮ್ಮೆಲ್ಲರನ್ನೂ ಇಷ್ಟು ಬೇಗ ತೊರೆದು ಹೋದದ್ದು..........
ವಿಷ್ಣು ಸಾರ್ ವಿ ಮಿಸ್ ಯು....--- ಅಶೋಕ ಉಚ್ಚಂಗಿ
Subscribe to:
Post Comments (Atom)
3 comments:
illa vishnu nammannu bittu hogilla ,namm manadalli avar nenapu yavagalu hasirage iruttade.
nanna nechchin actor vishnu nammondige yavaglu irtare. i love vishnu
Vishnu is great, no doubt about that
Our salute to him
ಅಶೋಕರವರೆ...
ಹೊಸವರ್ಷದ ಶುಭಾಶಯಗಳು...
ಕಳೆದು ಹೋಗಿದ್ದ ಅಶೋಕ ಮತ್ತೆ ಸಿಕ್ಕಿದ್ದಕ್ಕೆ ಖುಷಿಯಾಯಿತು...
ವಿಷ್ಣು ಅವರ ನಡತೆ.., ಸಜ್ಜನಿಕೆಯಿಂದಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು...
ಅವರ ಅಡುಗೆ ಮನೆಯಲ್ಲಿ ಒಬ್ಬ ಮುಸ್ಲೀಮ್ ಬಾಂಧವನಿದ್ದ ಎಂದರೆ ಬೇರೆ ಉದಾಹರಣೆಯೇ ಬೇಕಿಲ್ಲ ಅನಿಸುತ್ತದೆ..
ಅವರು ನಮ್ಮಿಂದ ದೂರವಾಗಿಲ್ಲ...
ಆಗುವದೂ ಇಲ್ಲ.....
ನಮ್ಮೊಳಗೇ ಇದ್ದು ಬಿಡುತ್ತಾರೆ ಮರೆಯದ ನೆನಪಾಗಿ.. ಅಲ್ಲವೇ...?
ಅಭಿಮಾನ ಸ್ಟುಡಿಯೋದಲ್ಲಿ ದಿನಾಲು ಜನ ಜಾತ್ರೆ ನೋಡಿದರೆ..
ಕಣ್ಣುಗಳು ಮಂಜಾಗಿ ಬಿಡುತ್ತವೆ...
ಇತ್ತೀಚೆಗೆ ನನಗೆ ಇಷ್ಟವಾಗಿದ್ದು ಅವರ "ಸಿರಿವಂತ" ಸಿನೇಮಾ...
ನೋಡಿದ್ದೀರಾ..?
ದಯವಿಟ್ಟು ನೋಡಿ...
Post a Comment