Wednesday, November 30, 2011

ಮಕ್ಕಳು ಹಿಡಿಯೋರು ಬಂದಿದ್ದಾರಂತೆ....


ಮಕ್ಕಳ ಹಿಡಿಯೋರು....!

ಯಾರು ಹೇಳ್ತಾರೋ....ಯಾವಾಗ ಹೇಳ್ತಾರೋ ಗೊತ್ತಿಲ್ಲ.....ಮಕ್ಕಳು ಇದ್ದಕ್ಕಿದ್ದಂತೆ ಈ ಗಾಳಿಸುದ್ದಿಯನ್ನು ಒಬ್ಬರಿಂದ ಒಬ್ಬರಿಗೆ ಹರಡಿ ಹೆದರಿ ಕಂಗಾಲಾಗುತ್ತವೆ...ಇತರ ಮಕ್ಕಳನ್ನು ಚಿಂತೆಯ ಕಡಲಲ್ಲಿ ತೇಲಿಸುತ್ತವೆ...

ಮಕ್ಕಳು ಹಿಡಿಯೋರು ಬಂದಿದ್ದಾರಂತೆ....ಅಜ್ಜಿ ಹೇಳಿದ್ರು..ಹೊರಗೆಲ್ಲೂ ಹೋಗ್ಬೇಡ ಅಂತ.....
ಮಕ್ಕಳು ಹಿಡಿಯೋರು ಬಂದಿದ್ದಾರಂತೆ....ನಾನಂತೂ ಆಟಕ್ಕೆ ಬರೋಲ್ಲಪ್ಪಾ......
ಆಕಡೆ ಬೀದಿಯ ಶ್ವೇತನ್ನಾ ಮಕ್ಕಳು ಹಿಡಿಯೋರು ಹಿಡ್ಕೊಂಡು ಹೋಗಿದ್ರಂತೆ.....ಅವರಪ್ಪಾ ಪೋಲಿಸಿಗೆ ಹೇಳಿ ಬಿಡಿಸಿ ಕೊಂಡು ಬಂದ್ರಂತೆ....
ಹೀಗೆ ಗುಸುಗುಸು ಆಗಾಗ ಮಕ್ಕಳ ಬಾಯಲ್ಲಿ ಕೇಳಿಬರುತ್ತವೆ....

ಮೊನ್ನೆ ಹೀಗಾಯ್ತು..ಹೊನ್ನಾವರದ ಹತ್ತಿರದ ಹಳ್ಳಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದೆ,ಶಾಲೆ ಬಿಟ್ಟ ಸಮಯ,ಇಳಿ ಬಿಸಿಲು,ಹಸಿರು ಹೊದ್ದ ಹಾದಿ,ನೆರಳು ಬೆಳಕಿನಾಟ.....
ಇಂತಹ ಹಿತಕರ ಸನ್ನಿವೇಶದಲ್ಲಿ....ಶಾಲೆಯಿಂದ ಮನೆಯತ್ತ ಹೊರಟ ಮಕ್ಕಳು ರಸ್ತೆಯ ತುಂಬಾ ಆಟವಾಡುತ್ತಾ ಬರುತ್ತಿದ್ದರೆ...ಕ್ಯಾಮೆರಾ ಎತ್ತದೆ ಸುಮ್ಮನಿರಲಾದೀತೇ....?
ಸೂಕ್ತ ಜಾಗ ನೋಡಿ ಮಕ್ಕಳ ಚಿತ್ರ ತೆಗೆಯಲು ಅಣಿಯಾಗುತ್ತಿದ್ದಂತೆ ನನ್ನನ್ನು ಗಮನಿಸಿದ ಪೋರಿಯೊಬ್ಬಳು ಏ..ಮಕ್ಕಳು ಹಿಡಿಯೋರು......ಓಡಿ...ಓಡಿ....ಎಂದೊಡನೇ ಇಲ್ಲಾ ಮಕ್ಕಳು ಬಂದದಾರಿಯಲ್ಲೇ ತಿರುಗಿ ಓಡಿ ಬಿಡೋದೆ..!

ನಾನು ಮುನ್ನಡೆದಂತೆಲ್ಲಾ ಅವು ಇನ್ನೂ ಜೋರಾಗಿ ಓಡ ತೊಡಗಿದವು! ಕ್ಯಾಮೆರಾ ಚೀಲಕ್ಕೆ ಸೇರಿಸಿದೆ...ರಸ್ತೆಯಂಚಲ್ಲಿ ಸ್ವಲ್ಪ ಹೊತ್ತು ನಿಂತೆ..ಉಹೂಂ...ಮಕ್ಕಳು ಮಾತ್ರ ಮನೆಯ ಹಾದಿಗೆ ಮರಳಲಿಲ್ಲ!

ನಾನಂತೂ ಮುಂದೆ ಸಾಗ ಬೇಕಿತ್ತು...ಇವು ಹೀಗೆ ಓಡುತ್ತಲೇ ಹೋದರೆ.... ಕತ್ತಲಾದರೆ ಮಕ್ಕಳು ತಿರುಗಿ ಮನೆ ಸೇರುವ ಬಗೆ ಹೇಗೆ ಎಂಬ ಚಿಂತೆಯೂ ಕಾಡಿತು...
ದಿಗಿಲಿನಿಂದ ಓಡುತ್ತಿರುವ ಮಕ್ಕಳನ್ನು ನೋಡಿ ಯಾರಾದರು ನಾನು ನಿಜವಾಗಿಯೂ ನಾನು ಮಕ್ಕಳ ಕಳ್ಳನೆಂದು ತಿಳಿದು ನನಗೆ ತದುಕಿದರೆ..ಎಂಬ ಚಿಂತೆಯೂ ಮೂಡಿತು..ಅಪರಿಚಿತ ಸ್ಥಳ ಬೇರೆ!
ಮಕ್ಕಳು ಓಡುತ್ತಿದ್ದವು,,ನಾನು ನಿಂತೂ ನಿಂತೂ ನಿಧಾನವಾಗಿ ನಡೆಯಡಗಿದೆ....ಸುಮಾರು ಒಂದು ಕಿಮೀ ಸಾಗಿರಬೇಕು...ಅಬ್ಬಾ ರಸ್ತೆಯಂಚಿನ ತಗ್ಗಿನಲ್ಲಿ ಶಾಲೆಯಿತ್ತು...ಮಕ್ಕಳು ಶಾಲೆಗೆ ಹಿಂತಿರುಗಿವೆ ಎಂದು ಸ್ಪಷ್ಟವಾಯ್ತು.....ಹಾಗೆಯೇ ಆಗಿರಲಿ ಎಂದು ಹರಸಿ ವೇಗವಾಗಿ ಮುಂದೆ ಸಾಗತೊಡಗಿದೆ....ಶಾಲೆಯೊಳಗಿನಿಂದ ಏ..ನೋಡ್ರೇ....ಮಕ್ಕಳ ಕಳ್ಳ ಓಡ್ತಾಯಿದ್ದಾನೆ...ಎಂದು ಕಿರುಚಿತ್ತಿರುವುದು ಕೇಳುತ್ತಿತ್ತು....ನನ್ನ ಪರಿಸ್ಥಿತಿಗೆ ನನಗೇ ನಗು ಬಂತು...ಜೋರಾಗಿ ನಗುತ್ತಾ ಮುಂದೆ ಸಾಗ ತೊಡಗಿದೆ....

Thursday, November 24, 2011

ಬತ್ತದ ಹಾಲು








ಪ್ರಿಯರೇ..... ಗದ್ದೆ ಹೊಡೆಯಾಗಿ,ಬತ್ತದ ಹಾಲು ಅಕ್ಕಿಯಾಗುವ ಈ ಸಮಯದಲ್ಲಿ ನಿಸರ್ಗವನ್ನು ನೋಡುವುದೇ ಆನಂದ.ಬತ್ತದ ಗದ್ದೆಯಲ್ಲಿ ಸುಯ್ಯಿಗೊಡುವ ಮೂಡಲ ಗಾಳಿ,ನಿರ್ಮಲ ಆಗಸದಲ್ಲಿ ಅಸ್ತಂಗತನಾಗುತ್ತಿರುವ ನೇಸರ,ಸಣ್ಣಗೆ ಸದ್ದು ಮಾಡುತ್ತಾ ಹರಿವ ತೊರೆ,ಹಸಿರು ಹುಲ್ಲೂ ಕೆಂಪಾಗಿ ತೆನೆಬಿಟ್ಟ ಈ ದಿನಗಳೆಂದ್ರೆ ನನಗಿಷ್ಟ ಜೊತೆಗೆ ಏನೋ ಕಳೆದುಕೊಂಡಂತೆ ಘಾಸಿಯಾಗುವ ಮನಸ್ಸು.ಕಾರಣ ನನಗಂತೂ ಗೊತ್ತಿಲ್ಲ.ಈ ಬಗ್ಗೆ ಯೋಚಿಸಿದರೆ ಹೊಳೆಯುವುದು ನೂರಾರು ಕಾರಣ.ಪ್ರತಿವರ್ಷವೂ ಈ ವೇಳೆಗೆ ಸರಿಯಾಗಿ ನನ್ನ ಮನಸ್ಸಿನಲ್ಲಾಗುವ ಹೋಯ್ದಾಟ ನನಗೇ ಅಚ್ಚರಿಯನ್ನುಂಟು ಮಾಡುತ್ತದೆ!

Tuesday, January 4, 2011

ಚಳಿಯ ಬೆಳಗು!!



ಚಳಿಯ ಛಳಕು!

ಚಳಿಗಾಲ ಮಳೆಗಾಲದಂತಿಲ್ಲ.ಆಗಾಗ ಕೊರೆವ ಚಳಿ,ಎಲ್ಲೋ ಒಂದೆರಡು ದಿನ ಬಿದ್ದ ಹಿಮ,ಆದರೂ ಚಳಿಗಾಲದ ಬೆಳಗಿನ ನೋಟ ವಿಭಿನ್ನವೇ ಸರಿ.ಹಾಲಿನವ ಇಷ್ಟು ಮುಂಚೆ ಏಕೆ ಬರುತ್ತಾನೋ ಎಂದು ಬೈದುಕೊಳ್ಳುವ ಕಾಲವಿದು.ಪ್ಯಾಕೇಟ್ ಹಾಲಾದರೆ ಎಷ್ಟು ಹೊತ್ತಿಗಾದರೂ ಸಿಗುತ್ತೇ ಅದೇ ಸರಿ ಎನ್ನುವ ಸೋಮಾರಿ ಮನಸ್ಸು.ಬೈಗಿನಲ್ಲಿ ಹೊರಟು ಸುಖ ನಿದ್ರೆ ಕೆಡಿಸುವ ಹಾಲಪ್ಪ,ಹಾಲಮ್ಮಂದಿರಿಗೆ ಈ ಫೋಟೋ ಅರ್ಪಣೆ!!


Wednesday, April 7, 2010

**** ಚಿತ್ರ ಕಲ್ಪನೆ--೨ *****

ಚಿತ್ರ ಕಲ್ಪನೆ--2

ಗೆಳೆಯರೆ
ಇಗೋ ಇಲ್ಲಿದೆ ಚಿತ್ರ-ಕಲ್ಪನೆ -೨.
ನೀವು ಈ ಚಿತ್ರಕ್ಕೆ ಸಂಬಂಧಿಸಿದಂತೆ ಕವನ,ಶೀರ್ಷಿಕೆ,ಕಥೆ,ವಿಚಾರ ಮೊದಲಾದವುಗಳನ್ನು ನನ್ನ ಈ ಮೈಲ್ ವಿಳಾಸಕ್ಕೆ ಕಳಿಸಬಹುದು.ಉತ್ತಮ ಬರಹಗಳು ಮುಂದಿನ ಬ್ಲಾಗ್ ಪೋಸ್ಟಿನಲ್ಲಿ ಎಲ್ಲರಿಗೂ ತಲುಪುತ್ತದೆ.

ನನ್ನ ಈ ಮೈಲ್-- mysoremallige2008@gmail.com
ಅಶೋಕ ಉಚ್ಚಂಗಿ

Monday, March 22, 2010

ಮಳೆಯಲಿ ಬಿಸಿಲೆಘಾಟಿಯಲಿ.......

....ಮಳೆಯಲಿ....... ಕಿರಣನ ಜೊತೆಯಲಿ....ಬಿಸಿಲೆ ಘಾಟಿಯ ಹಾದಿಯಲಿ......
ಹಿಂದಿನ ಬ್ಲಾಗ್ ಬರಹ ಮಾಸಿದ ಹಾದಿಯಲ್ಲಿ ಮೂಡಿದ ಹೆಜ್ಜೆಗಳು ಇದರ ಸಾರಾಂಶ....

ನಾನು ನನ್ನೂರಿಗೆ ವರ್ಷದಲ್ಲಿ ಸುಮಾರು ನಾಲ್ಕು ಬಾರಿ ಹೋಗುತ್ತೇನೆ. ಒಂದು ದಿನದ ಭೇಟಿಗೆಂದು ಡಿಸೆಂಬರ್ ನಲ್ಲಿ

ಹೋದವನು ಮಗಳಿಗೆ ಉಚ್ಚಂಗಿ ದರ್ಶನ ಮಾಡಿಸೋಣವೆಂದು ಊರು ಸುತ್ತಲು ಹೊರಟೆ. ಗವಿಬೆಟ್ಟ,ಜುಳುಜುಳು ಹರಿಯುತ್ತಿದ್ದ ಆನೆ ಕಾಲುವೆ ಇವೆಲ್ಲವೂ ನನ್ನಲ್ಲಿ ಏನನ್ನೋ ಕಳೆದು ಕೊಂಡದ್ದು ಮರಳಿ ಪಡೆದಂತೆ ಅವ್ಯಕ್ತ ಆನಂದ ಮೂಡಿಸಿತು.ನನ್ನ ಮಗಳಿಗಂತೂ ಮಗುವನ್ನು ಮೊದಲ ಬಾರಿಗೆ ಜಾತ್ರೆಗೆ ಕರೆದುಕೊಂಡು ಹೋದಂತಾ ಸಂಭ್ರಮ!

ಬತ್ತದ ಗದ್ದೆಗೆ ಕಾಲಿಟ್ಟಾಗ ಬತ್ತದ ತೆನೆಯ ಸುವಾಸನೆ ಕಾಡಿನ ಗಂಧಗಾಳಿಯಲ್ಲಿ ಸೇರಿ ವಿಶಿಷ್ಟ ಪರಿಮಳವನ್ನು ಎಲ್ಲೆಡೆ ಹರಡಿತ್ತು.ಒಂದರ ಹಿಂದೊಂದು ನಿಂತ ಬೆಟ್ಟಸಾಲುಗಳ ಹಿಂದಿನಲ್ಲಿ ಪುಷ್ಪಗಿರಿ ಗಾಂಭೀರ್ಯದಿಂದ ನಿಂತಿತ್ತು.


ಇದರ ಮುಂದುವರೆದ ಭಾಗ ಪುಷ್ಪಗಿರಿ ಬೆಟ್ಟ ಸಾಲಿನಲ್ಲಿ ಮಳೆಗಾಲದಲ್ಲಿ ಅಡ್ಡಾಡಿದ ಅನುಭವವನ್ನು ನನ್ನ ಉಚ್ಚಂಗಿ ಬಳಗ ಬ್ಲಾಗಿನಲ್ಲಿದೆ.....ಇಲ್ಲಿಂದ ಅಲ್ಲಿಗೆ ಹೀಗೆ ಸಾಗಿ.....


Tuesday, March 16, 2010

ಚಿತ್ರ ನನ್ನದು ಕಲ್ಪನೆ ನಿಮ್ಮದು......!

ಚಿತ್ರ ನನ್ನದು ಕಲ್ಪನೆ ನಿಮ್ಮದು......!




ಯುಗಾದಿಯ ಹಾರ್ದಿಕ ಶುಭಾಶಯಗಳು

ನಾನು ನನ್ನ ಈ ಹಿಂದಿನ ಬ್ಲಾಗ್ ಪೋಸ್ಟಿನಲ್ಲಿ ಮೂರು ಚಿತ್ರಗಳನ್ನು ಹಾಕಿ ಯುಗಾದಿಯ ಕಲ್ಪನೆಗೆ ಓದುಗರಿಂದ ಬರಹಗಳನ್ನು ಆಹ್ವಾನಿಸಿದ್ದೆ.ಅನೇಕರು ಚಿತ್ರಗಳು ಚೆನ್ನಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೂ ಅನೇಕರು ಈ ಚಿತ್ರಗಳಿಗೆ ಯುಗಾದಿಯ ಚಿಂತನೆ ಕಳುಹಿಸಿದ್ದಾರೆ.ಈ ಮೂರೂ ಚಿತ್ರಗಳಿಗೂ ಹೊಂದಿಕೆಯಾಗುವಂತೆ ಸರಳ, ಸುಂದರ ಸಂದೇಶ ಕಳುಹಿಸಿದವರು ಬ್ಲಾಗಿಗ ಈಶ್ವರ "ಕಿರಣ" ಭಟ್ http://kiranakomme.wordpress.com/


ನನ್ನ ಚಿತ್ರಕ್ಕೆ “ ಕಿರಣ್ ”ಅವರ ಕಲ್ಪನೆಯಲ್ಲಿ ಯುಗಾದಿ ಹಾರೈಕೆ ಇಂತಿದೆ...


ಬಿದ್ದ ಹೂವು - ಬಿದ್ದ ನೋವಾಗಲಿ


ಆರಿಸಿದ ಹೂವು - ಹರಸಿದ ಬದುಕಾಗಲಿ


ಬೇವಿನ ಚಿಗುರು - ನೋವಿಗೆ ಕಹಿಯಾಗಲಿ


ಅಶ್ವಥದ ಚಿಗುರು ಸಮೃಧ್ಧ ಬದುಕಿಗೆ ಸಂಕೇತವಾಗಲಿ

ಎಂದು ಹಾರೈಸುತ್ತೇನೆ
ಈಶ್ವರ "ಕಿರಣ" ಭಟ್ http://kiranakomme.wordpress.com/
"ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕಗೊಂಡಿತು ಧಾರಿಣಿ "

ಎಷ್ಟು ಅರ್ಥಗರ್ಭಿತ ಅಲ್ಲವೇ?


ಕಿರಣ್ ಅವರಿಗೆ ಧನ್ಯವಾದ...
ಇನ್ನು ಮುಂದೆಯೂ ಚಿತ್ರ-ಕಲ್ಪನೆ ವಿಭಾಗದಲ್ಲಿ ಚಿತ್ರಗಳನ್ನು ಹಾಕಿ ನಿಮ್ಮ ಅನಿಸಿಕೆಗಳನ್ನು ಆಹ್ವಾನಿಸುವ ಚಿಂತನೆ ನನಗಿದೆ.ನೀವುಗಳೂ ಸ್ಪಂದಿಸುತ್ತೀರೆಂಬ ವಿಶ್ವಾಸದಲ್ಲಿದ್ದೇನೆ...
ಯುಗಾದಿ ಚಿಂತನೆಯನ್ನು ಹಂಚಿಕೊಂಡ ವೀರೇಶ್ ತಾವರೆಕೆರೆ,"ಸಹಜ",ವಿಶ್ವಾಸ್ ಅವರಿಗೆ ಹಾಗೂ ಪ್ರತಿಕ್ರಿಯಿಸಿದ ಚುಕ್ಕಿಚಿತ್ತಾರ,ಶಂಭುಲಿಂಗ,ದೀಪಸ್ಮಿತ ಅವರಿಗೂ ನನ್ನ ಧನ್ಯವಾದಗಳು.ತಮಗೆಲ್ಲರಿಗೂ ಯುಗಾದಿಯ ಶುಭ ಹಾರೈಕೆಗಳು.
ಚುಕ್ಕಿಚಿತ್ತಾರ said...
chitragalu chennaagive..bellada chitravannoo haakiddare ugaadige bevu, bella aaguttittu....!
March 10, 2010 8:08 AM

ಶಂಭುಲಿಂಗ said...
ಚೆನ್ನಾಗಿದೆ ಚಿತ್ರಗಳು.
March 13, 2010 1:48 AM

Deepasmitha said...
ಒಳ್ಳೆಯ ಚಿತ್ರಗಳು. ಬೇವು ಬೆಲ್ಲ ಜೀವನದ ಅವಿಭಾಜ್ಯ ಅಂಗ. ಬೇವು ಕಹಿ ಇರಬಹುದು, ಆದರೆ ಅತ್ಯುತ್ತಮ ಔಷಧಿ. ಹಾಗೆಯೇ, ಕಹಿಯಾದ ಕಷ್ಟಗಳು ಒಂದರ್ಥದಲ್ಲಿ ಔಷಧಿಗಳೇ, ನಮಗೆ ಅಷ್ಟು ಬೇಗ ಗೊತ್ತಾಗುವುದಿಲ್ಲ ಅಷ್ಟೆ. ನಿಮಗೂ ಯುಗಾದಿಯ ಹಾರ್ದಿಕ ಶುಭಾಷಯಗಳು. ನಿಮ್ಮಿಂದ ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸುತ್ತಿದ್ದೇನೆ
March 14, 2010 4:02 AM

**** ಅಶೋಕ ಉಚ್ಚಂಗಿ *****

Wednesday, March 10, 2010

ಯುಗಾದಿ ಕಲ್ಪನೆ-- ಹಾಗೆ ಸುಮ್ಮನೆ....!!!



ಪ್ರಿಯ ಬ್ಲಾಗ್ ಮಿತ್ರರೇ.....
ಅನೇಕ ಬ್ಲಾಗ್ ಗೆಳೆಯರ ಲೇಖನವನ್ನು ಓದುತ್ತಿದ್ದಾಗ ನನ್ನ ಬ್ಲಾಗಿನಲ್ಲೂ ಹೊಸ ವಿಷಯಗಳನ್ನು ಬರೆಯಲು ಮನಸ್ಸು ಬರುತ್ತೆ.ಆದರೆ ಕೆಲಸದ ಒತ್ತಡ ಜೊತೆಗೆ ಸೋಮಾರಿತನದ ಸಲುವಾಗಿ ಸಾಧ್ಯವಾಗುತ್ತಿಲ್ಲ.
ಇಂದು ಏನಾದರು ಬರೆಯೋಣವೆಂದು ಕುಳಿತಾಗ ಹಾಗೆ ಸುಮ್ಮನೆ ಚಿತ್ರವೊಂದನ್ನು ಹಾಕೋಣ ಎಂದುಕೊಂಡೆ.ಬರಿ ಚಿತ್ರವನ್ನು ಹಾಕುವ ಬದಲಿಗೆ ಕಲ್ಪನೆಗೆ ಇಂಬು ನೀಡುವಂತಹ ಚಿತ್ರವನ್ನು ಹಾಕುವ ಮನಸ್ಸಾಯಿತು.ಯುಗಾದಿ ಹೇಗಿದ್ದರೂ ಹತ್ತಿರವಿದೆ...ಅದೇ ಗುಂಗಿನಲ್ಲಿದ್ದ ನನಗೆ ಯುಗಾದಿಗೆ ಸಂಬಂಧಿಸಿದಂತೆ ಛಾಯಾಚಿತ್ರವೊಂದನ್ನು ಹಾಕಿ ಬ್ಲಾಗಿಗರ ಕಲ್ಪನೆಯಲ್ಲಿ ಯುಗಾದಿಯ ಚಿಂತನೆ ಹೇಗೆ ವ್ಯಕ್ತವಾಗುತ್ತೆ ಎಂದು ನೋಡುವ ಮನಸ್ಸಾಯಿತು...ಇದೋ ಇಲ್ಲಿದೆ ಚಿತ್ರಗಳು.....ನಿಮ್ಮ ಕಲ್ಪನೆಯಲ್ಲಿ ಯುಗಾದಿಯ ಹಾದಿಯಲ್ಲಿನ ಪ್ರಕೃತಿ ಕವಿತೆಯಾಗಿ,ಹಾಡಾಗಿ,ಮನದಾಳದ ಮಾತಾಗಿ,ಚಿಂತನೆಯಾಗಿ,ಸೊಗಸಾದ ಪದಗಳನ್ನು ಜೋಡಿಸಿದ ಸುಂದರ ಸಾಲಾಗಿ ಹೊರಹೊಮ್ಮುತ್ತದೆಂದು ಭಾವಿಸಿದ್ದೇನೆ.ನಿಮ್ಮ ಇತರೆ ಬ್ಲಾಗ್ ಗೆಳೆಯರಿಗೂ ತಿಳಿಸಿ. ನನ್ನ ಪ್ರೊಫೈಲ್ ನಲ್ಲಿ ನನ್ನ ಇ ಮೇಲ್ ವಿಳಾಸವಿದೆ .....ನಿಮ್ಮ ಬರಹಗಳು ಇಲ್ಲಿಗೆ ತಲುಪಲಿ....ಅತ್ಯುತ್ತಮವಾದ ಬರಹಗಳು ಯುಗಾದಿಯ ಸಂದರ್ಭದಲ್ಲಿ ಇನ್ನಷ್ಟು ಚಿತ್ರಗಳ ಜೊತೆಗೆ ಇನ್ನೊಂದು ಬ್ಲಾಗ್ ಬರಹವಾಗಿ ಎಲ್ಲರಿಗೂ ತಲುಪಲಿದೆ...
ಖಂಡಿತಾ ಬರೀತೀರಿ ತಾನೇ.....?




ಚಿತ್ರಗಳು ಯುಗಾದಿಯ ಕಲ್ಪನೆಗಾಗಿ........
ಯಾವುದೇ ಚಿತ್ರಕ್ಕದರು ನಿಮ್ಮ ಕಲ್ಪನೆಯನ್ನು ಬರೆದು ಕಳಿಸಬಹುದು....





Tuesday, February 9, 2010

****ಮಾಸಿದ ಹಾದಿಯಲ್ಲಿ ಕಂಡ ಹೆಜ್ಜೆ ಗುರುತುಗಳು`*`*`*



ಮಾಸಿದ ಹೆಜ್ಜೆಯ ಹುಡುಕುತ್ತಾ......

ನಾನು ನನ್ನೂರಿಗೆ ವರ್ಷದಲ್ಲಿ ಸುಮಾರು ನಾಲ್ಕು ಬಾರಿ ಹೋಗುತ್ತೇನೆ.ಏಪ್ರಿಲ್ ತಿಂಗಳಲ್ಲಿ ರಾಮೋತ್ಸವದ ವೇಳೆಯಲ್ಲಿ ಉತ್ಸವದಲ್ಲಿ ಭಾಗಿಯಾಗಿ ಊರವರನ್ನೆಲ್ಲಾ ಭೇಟಿಯಾಗಲು,ಮಳೆಗಾಲದಲ್ಲಿ ಮಳೆಯ ಹಾಡು ಕೇಳಲು,ಗಣಪತಿ ಹಬ್ಬದ ವೇಳೆಯಲ್ಲಿ ಮನೆಮಂದಿಯೆಲ್ಲಾ ಒಟ್ಟಿಗೆ ಸೇರಲು ಹಾಗೂ ಇನ್ನಾವುದಾದರೂ ಸಮಾರಂಭವಿದ್ದರೆ ಇಲ್ಲವೇ ಕಾರ್ತಿಕ ಮಾಸದಲ್ಲಿ ಒಂದೆರಡು ದಿನ ಊರಿನಲ್ಲಿದ್ದು ಬರುತ್ತೇನೆ.ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿಯ ಚಳಿಯಲ್ಲಿ ಊರಿಗೆ ಹೋಗಿ ಎಷ್ಟೋ ವರ್ಷವಾಗಿತ್ತು.ಚಳಿಯೇ ಇಲ್ಲವೆಂದು ಎಲ್ಲರೂ ಹೀಗಳೆಯುತ್ತಿದ್ದ ವೇಳೆಯಲ್ಲಿ ನಮ್ಮೂರಿನ ಚಳಿ ಎಲ್ಲರಿಗೂ ಸವಾಲು ಹಾಕಿತ್ತು.ಸಂಜೆ ನಾಲ್ಕಕ್ಕೇ ಚುಮುಚುಮು ಚಳಿ ಆರಂಭವಾಯಿತೆಂದರೆ ಬೆಳಿಗ್ಗೆ ಹತ್ತು ಗಂಟೆಯವರೆಗೂ ದಮ್ಮಯ್ಯಾ ಎಂದರೂ ಚಳಿ ಕಾಲ್ಕೀಳುತ್ತಿರಲಿಲ್ಲ.ಒಂದು ದಿನದ ಭೇಟಿಗೆಂದು ಹೋದವನು ಮನೆಯವರ ಬಲವಂತದ ಮೇರೆಗೆ ಇನ್ನೊಂದು ದಿನ ಉಳಿಯಬೇಕಾಯಿತು.ಕ್ಯಾಮೆರಾವನ್ನೂ ತೆಗೆದುಕೊಂಡು ಹೋಗಿರಲಿಲ್ಲ.ನಮ್ಮಣ್ಣನ ಮಗಳ ಪುಟ್ಟ ಡಿಜಿಟಲ್ ಕ್ಯಾಮೆರಾ ಸಧ್ಯಕ್ಕೆ ನನ್ನ ಸಂಗಾತಿಯಾಗಿತ್ತು.ಸಾಮಾನ್ಯವಾಗಿ ಮಳೆಗಾಲವನ್ನೇ ಹೆಚ್ಚಾಗಿ ನೋಡುತ್ತಿದ್ದ ನನಗೆ ಈ ವೇಳೆಯ ನನ್ನೂರಿನ ವಾತಾವರಣ ತೀರ ವಿಭಿನ್ನವಾಗಿಯೇ ಕಂಡು ವಿಭಿನ್ನ ಅನುಭವ ನೀಡಿತು.ಶಾಲಾ ದಿನಗಳಲ್ಲಷ್ಟೇ ಅನುಭವಿಸಿದ್ದ ಚಳಿಗಾಲದ ದಿನಗಳ ಹಳೆಯ ನೆನಪನ್ನು ಮರುಕಳಿಸುವಂತೆ ಮಾಡಿತ್ತು.ಕಾಫಿ ಹಣ್ಣು ಗಿಡದ ತುಂಬಾ ನಳನಳಿಸುತ್ತಿತ್ತು.ಊರಲ್ಲಿ ಅನೇಕರ ಮನೆಯ ಅಂಗಳದಲ್ಲಿ ಕಾಫಿ ಒಣಹಾಕಿದ್ದರು.ಈ ಬಾರಿಯ ಅಕಾಲಿಕ ಮಳೆ ಬಹು ಬೇಗನೆ ಕಾಫಿ ಕುಯ್ಲಿಗೆ ಬರುವಂತೆ ಮಾಡಿತ್ತು.ಹಣ್ಣು ಕಾಫಿಯ ಸುವಾಸನೆ (ಘಾಟು ವಾಸನೆ) ದಾರಿಯೆಲ್ಲೆಲ್ಲಾ ಹರಡಿತ್ತು.ಮನೆಯ ಹಿತ್ತಲಿನಲ್ಲಿ ನಮ್ಮ ಅಜ್ಜ ಹಾಕಿದ ಕಾಫಿ ಗಿಡಗಳು ಆರೈಕೆಯ ಕೊರತೆಯಲ್ಲೂ ಗಿಡದ ತುಂಬಾ ಹಣ್ಣನ್ನು ಹೊತ್ತುಕೊಂಡು ನಿಂತಿತ್ತು.ಪನ್ನೇರಳೆ ಹೂ ಕಚ್ಚಿತ್ತು.




ನೆನ್ನೆ ಊರಿಗೆ ಆನೆ ಬಂದಿತ್ತಂತೆ.ಕಾಡನೆ ಅಲ್ಲ! ಟಿಂಬರ್ ಆನೆ.ಅಂದರೆ ಮರದ ದಿಮ್ಮಿಗಳನ್ನು ತೋಟಗಳಿಂದ ಎಳೆದು ಲಾರಿಗೆ ತುಂಬಿಸಲು ಬರುವ ಕಮರ್ಷಿಯಲ್ ಉದ್ದೇಶದ ಸಾಕಾನೆಗಳು!ಮನೆಯ ಮುಂದೆ ಬಂದಾಗ ಬೆಲ್ಲ.ಅಕ್ಕಿ,ಕಬ್ಬು,ಬಾಳೆಹಣ್ಣು ಮೊದಲಾದವುಗಳನ್ನು ಕೊಡುವುದು ಮಲೆನಾಡಿಗರ ವಾಡಿಕೆ.ನಮ್ಮ ಅಣ್ಣ ನನ್ನ ಮಗಳು ಇಂಪುವಿಗೆ ಆನೆಯ ಬಗ್ಗೆ ಹೇಳುತ್ತಿದ್ದರು.ಇವಳು ದಿನವೆಲ್ಲಾ ಅದೇ ಗುಂಗಿನಲ್ಲಿದ್ದು ಬೆಳಿಗ್ಗೆಯಿಂದಲೂ ಅಪ್ಪಾ ಆನೆ ತೋರ‍್ಸು.....ಎನ್ನುತ್ತಲೇ ಇದ್ದಳು.ಸಂಜೆ ಆನೆ ಎತ್ತ ಹೋಯಿತೆಂದು ವಿಚಾರಿಸೋಣ ಹಾಗೆಯೇ ಮಗಳಿಗೂ ಉಚ್ಚಂಗಿ ದರ್ಶನ ಮಾಡಿಸೋಣವೆಂದು ಮಗಳೊಡನೆ ಹೊರಟೆ.ಆನೆ ಹೊಂಗಡಹಳ್ಳದ ಕಡೆಗೆ ಹೋಯಿತೆಂದು ಗೊತ್ತಾಯಿತು.ಮಗಳನ್ನು ಸಮಾಧಾನ ಪಡಿಸಲು ಆನೆ ಇಲ್ಲಿದೆ ಅಲ್ಲಿದೆ ಎಂದು ಸುಳ್ಳು ಹೇಳುತ್ತಾ ನಾನು ಓದಿದ ಪ್ರಾಥಮಿಕ ಶಾಲೆ,ದೊಡ್ಡ ಮಿಲ್,ಬಾಹು ಬ್ಯಾರಿ,ಚರಿಯರ ಮನೆ,ಗೌಡರ ಬೀದಿ ಎಲ್ಲವನ್ನೂ ತೋರಿಸುತ್ತಾ ಹಳೆ ಮಿಲ್ಲಿನ ಹಿಂಬದಿಯ ಮಠದ ಕೇರಿ ಹಾದಿ ಹಿಡಿದೆ.ಇಲ್ಲಿ ಹಿಂದೆ ಗೆಳೆಯ ಅಕ್ಬರನ ಮನೆಯಿತ್ತು.ಚಿಕ್ಕಂದಿನಲ್ಲಿ ಎಲ್ಲೆಲ್ಲಾ ಅದೆಷ್ಟು ಸಾರಿ ಓಡಾಡಿದ್ದವೋ ಏನೋ......(ಬದಲಾದ ಪರಿಸ್ಥಿತಿಯಲ್ಲಿ ಅಕ್ಬರನ ಕುಟುಂಬ ಮಂಗಳೂರಿನ ಕಡೆ ಹೋಗಿತ್ತು,ಈಗ ಎಲ್ಲಿದ್ದಾನೋ?ಹೇಗಿದ್ದಾನೋ?!)ಬಹಳ ದಿನಗಳ ಬಳಿಕ ಈ ಹಾದಿಯಲ್ಲಿ ಬಂದಿದ್ದೆನಾದ್ದರಿಂದ ನನಗೂ ಒಂಥರಾ ಹೊಸ ಅನುಭವ.ಸುತ್ತಲ ಕಾಡು,ತೆನೆಗೂಡಿದ ಬತ್ತದ ಗದ್ದೆಗಳು ಅದರ ಹಿಂಬದಿಗೆ ಎದ್ದು ನಿಂತ ಗವಿಬೆಟ್ಟ,ಜುಳುಜುಳು ಹರಿಯುತ್ತಿದ್ದ ಆನೆ ಕಾಲುವೆ ಇವೆಲ್ಲವೂ ನನ್ನಲ್ಲಿ ಏನನ್ನೋ ಕಳೆದು ಕೊಂಡದ್ದು ಮರಳಿ ಪಡೆದಂತೆ ಅವ್ಯಕ್ತ ಆನಂದ ಮೂಡಿಸಿತು.ನನ್ನ ಮಗಳಿಗಂತೂ ಮಗುವನ್ನು ಮೊದಲ ಬಾರಿಗೆ ಜಾತ್ರೆಗೆ ಕರೆದುಕೊಂಡು ಹೋದಂತಾ ಸಂಭ್ರಮ!ಕಾಡುಮೇಡು,ತೊರೆ,ಮರಗಿಡ,ಪ್ರಾಣಿಪಕ್ಷಿಗಳು,ಹುಲ್ಲುಗಾವಲು ಇವೆಲ್ಲವನ್ನ ಅಚ್ಚರಿಯ ಕಣ್ಣಲ್ಲಿ ನೋಡುತ್ತಿದ್ದಳು.ಗಂಡಿ ದಾಟಿ (ದನಗಳು ಒಳಹೋಗದಂತೆ, ಮನುಷ್ಯರು ಹೋಗಲಷ್ಟೇ ಸಾಧ್ಯವಾಗುವಂತೆ ಹಾಕಿದ ಮರದ ಗೇಟು) ಬತ್ತದ ಗದ್ದೆಗೆ ಕಾಲಿಟ್ಟಾಗ ಬತ್ತದ ತೆನೆಯ ಸುವಾಸನೆ ಕಾಡಿನ ಗಂಧಗಾಳಿಯಲ್ಲಿ ಸೇರಿ ವಿಶಿಷ್ಟ ಪರಿಮಳವನ್ನು ಎಲ್ಲೆಡೆ ಹರಡಿತ್ತು.ಒಂದರ ಹಿಂದೊಂದು ನಿಂತ ಬೆಟ್ಟಸಾಲುಗಳ ಹಿಂದಿನಲ್ಲಿ ಪುಷ್ಪಗಿರಿ ಗಾಂಭೀರ್ಯದಿಂದ ನಿಂತಿತ್ತು.
ಮುಂದುವರೆಯುವುದು......



Wednesday, December 30, 2009

ನಾನು ವಿಷ್ಣುವರ್ಧನ್ ಅವರನ್ನು ನೋಡಿದ್ದು...


"ಕೋಟಿಗೊಬ್ಬ"

ಸುಮಾರು ಈಗ್ಗೆ ಹನ್ನೊಂದು ವರ್ಷದ ಹಿಂದಿನ ಮಾತು.ನಾನಾಗ ಮೈಸೂರಿನ ಅಗ್ರಹಾರ ವೃತ್ತದಲ್ಲಿರುವ ಫಿಲಿಪ್ಸ್ ಸರ್ವಿಸ್ ಸೆಂಟರ‍್ನಲ್ಲಿ ಕೆಲಸ ಮಾಡುತ್ತಿದ್ದೆ.ಬೆಳಿಗ್ಗೆ ಒಂಭತ್ತು ನಲವತ್ತರ ಸಮಯ.ರಸ್ತೆಯಲ್ಲಿ ಗದ್ದಲ ಕೇಳಿ ಹೊರಬಂದಾಗ ಯಾವುದೋ ಶೂಟಿಂಗ್’ಗೆ ಸಿನಿಮಾ ಮಂದಿ ಅಣಿಯಾಗುತ್ತಿದ್ದರು.ಶೂಟಿಂಗ್ ನೋಡಲು ಮಾಮೂಲಿನಂತೆ ಭಾರಿ ಜನಸ್ತೋಮ.ಮೋದಲನೇ ಅಂತಸ್ತಿನಲ್ಲಿ ನಮ್ಮ ಕಛೇರಿ ಇದ್ದದ್ದರಿಂದ ಇಡೀ ರಸ್ತೆಯ ವಿದ್ಯಮಾನಗಳ ಪಕ್ಷಿನೋಟ ನನಗೆ ಸಿಗುತ್ತಿತ್ತು.ವಿಷ್ಣುವರ್ಧನ್ ಬಂದಿದ್ದಾರೆ ಎಂದು ಪಕ್ಕದ ಕಟ್ಟಡದಿಂದ ಯಾರೋ ಕೂಗಿ ಹೇಳಿದರು.ನಾನಂತೂ ವಿಷ್ಣು ಸಾರ್ ಅವರ ದೊಡ್ಡ ಅಭಿಮಾನಿ.ಅವರನ್ನು ಇಲ್ಲಿಯವರಗೆ ನೋಡಿರಲಿಲ್ಲ.ಇಂತಹ ಅವಕಾಶ ಬಾಗಿಲಲ್ಲೇ (ಆಫೀಸ್ ಬಾಗಿಲಲ್ಲೇ!) ಬಂದು ನಿಂತಿರುವಾಗ ಮಿಸ್ ಮಾಡಿಕೊಳ್ಳಲಾದೀತೇ?ಅದೂ ಒಂದನೇ ಅಂತಸ್ತಿನಲ್ಲಿ ಆರಾಮ ನಿಂತು ಚಿತ್ರೀಕರಣವನ್ನು ತೀರಾ ಹತ್ತಿರದಲ್ಲೇ ನೋಡುವ ಅವಕಾಶ.ಕಾರ್ಯ ನಿಮಿತ್ತ ಮಡಿಕೇರಿಗೆ ಹೋಗಬೇಕಾದವನು ಶೂಟಿಂಗ್ ನೋಡಿಯೇ ಹೋಗಲು ತೀರ್ಮಾನಿಸಿದೆ.ಒಂದು ಕ್ಯಾಮೆರಾ ನೂರೊಂದು ಗಣಪತಿ ದೇಗುಲದ ಮುಂದೆ,ಇನ್ನೊಂದು ನಮ್ಮ ಆಫೀಸಿನ ಪಕ್ಕದ ಕಟ್ಟಡದಲ್ಲಿ,ಮಗದೊಂದು ಅಗ್ರಹಾರ ವೃತ್ತದಲ್ಲಿನ ಕಟ್ಟಡದಲ್ಲಿತ್ತು.ನಮ್ಮ ಆಫೀಸಿನ ಎದಿರಿಗೆ ಮೈಕ್ ಹಿಡಿದು ಕೌಬಾಯ್ ಟೋಪಿ ಧರಿಸಿದ ವ್ಯಕ್ತಿ ನಿರ್ದೆಶಕ ದಿನೇಶ್ ಬಾಬು ಎಂಬುದೂ ಗೊತ್ತಾಯಿತು.ಆದರೆ ನನ್ನ ಮೆಚ್ಚಿನ ವಿಷ್ಣು ಎಲ್ಲಿ?ಅಭಿಮಾನಿಗಳ ದಂಡು ಪೋಲೀಸರನ್ನೂ ಲಕ್ಕಿಸದೇ ಕಾರೊಂದರ ಸುತ್ತಾ ಜೇನುಹುಳುವಿನಂತೆ ಮುತ್ತಿತ್ತು.ಕಾರಿನ ಕಪ್ಪು ಗಾಜಿನಲ್ಲಿ ಇಣುಕಿ ನೋಡುತ್ತಿತ್ತು.ಚಿತ್ರೀಕರಣ ಹೇಗೆ ನಡೆಯುತ್ತೆ ಎಂಬ ಆಸಕ್ತಿಯಿದ್ದ ನನಗೆ ಇದೊಂದು ದೊಡ್ಡ ಅನುಭವ ಕಲ್ಪಿಸಿತ್ತು.ಈ ಜನರ ನೂಕುನುಗ್ಗಲಿನಲ್ಲಿ ಶೂಟಿಂಗ್ ಮಾಡುವುದು ಸುಲಭದ ಕೆಲಸವೇನೂ ಅಲ್ಲ.ಇಷ್ಟೆಲ್ಲಾ ಶ್ರಮವಹಿಸಿ ಶೂಟ್ ಮಾಡಿದ ಬಳಿಕ ಅದು ಸರಿಹೋಗದಿದ್ದರೆ ನೀರಲ್ಲಿ ಹೋಮ ಮಾಡಿದಂತೆ ಎಂದು ಆಗ ನನಗನ್ನಿಸಿತ್ತು.ನಿರ್ದೇಶಕ,ನಟ,ಕ್ಯಾಮೆರಾಮನ್ ಎಲ್ಲರಿಗೂ ಒಂದುರೀತಿಯ ಚಾಲೆಂಜ್ ಇದು.ದಿನೇಶ್ ಬಾಬು ಎಲ್ಲಾ ಕಡೆ ತಿರುಗಿ ರೆಡೀ ಎಂಬ ಸಂಕೇತ ನೀಡುತ್ತಿದ್ದರು.ಇನ್ನೇನು ವಿಷ್ಣು ಕಾರಿನಿಂದ ಇಳಿಯುತ್ತಾರೆ ಎಂದು ಎಲ್ಲರೂ ನೋಡುತ್ತಿದ್ದಾಗ ಕಾರಿನ ಸ್ವಲ್ಪದೂರದಲ್ಲಿ ನಿಂತಿದ್ದ ಪೋಲೀಸ್ ಜೀಪಿನ ಹಿಂದಿನ ಸೀಟಿನಿಂದ ವಿಷ್ಣು ಇಳಿದರು! ಕಾರಿನ ಕಡೆ ಗಮನ ಹರಿಸಿದ್ದ ಜನ ಬೆಸ್ತು ಬಿದ್ದು ಹೋ...ಎನ್ನುತ್ತಾ ವಿಷ್ಣು ಕಡೆ ಓಡತೊಡಗಿದರು.ಆಗ ಪೋಲಿಸ್ ವೇಷದಲ್ಲಿದ್ದ ಸಹ ಕಲಾವಿದರು ಲಾಠೀ ಜಾರ್ಜ ಮಾಡುವಂತೆ ಬೆತ್ತವನ್ನು ಜನರ (ಇದರಲ್ಲಿ ಸಿನಿಮಾ ತಂಡವೂ ಇತ್ತು) ಕಾಲಬಳಿ ಬಡಿಯುತ್ತಿದ್ದರು.ವಿಷ್ಣು ಸಾರ್ ಅವರನ್ನು ಅರೆಸ್ಟ ಮಾಡುವ ದೃಶ್ಯ ಇದೆಂದು ಆನಂತರ ತಿಳಿಯಿತು.ಸಹಜ ನಟ ಸಾಹಸಸಿಂಹ ಇಲ್ಲಿನ ಅಲ್ಲೋಲಕಲ್ಲೋಲ ವಾತಾವರಣದಲ್ಲಿ ಒಂದುಚೂರು ವಿಚಲಿತರಾಗದೆ ಏನಿದೆಲ್ಲಾ...?ದಯವಿಟ್ಟು ನನ್ನನ್ನು ಪೋಲೀಸರು ಅರೆಸ್ಟ್ ಮಾಡಿ ಕರೆದು ಕೊಂಡು ಹೋಗಲು ಅವಕಾಶ ಮಾಡಿಕೊಡಿ ಎಂದು ಜನರಲ್ಲಿ ಕೇಳಿಕೊಳ್ಳುವಂತೆ ಅದ್ಭುತವಾಗಿ ಅಭಿನಯಿಸಿದರು.ದಿನೇಶ್ ಬಾಬು ಓಕೆ ಎಂದರು.ಜನಜಂಗುಳಿಯ ಮಧ್ಯೆ ಟೊಮೆಟೋ ಹಣ್ಣಿನಂತೆ ಕೆಂಪಗಿದ್ದ ಕನ್ನಡನಾಡಿನ ಸುಂದರ ನಟನನ್ನು ಸಮೀಪದಿಂದ ನೋಡುವ ಅವಕಾಶ ನನ್ನದಾಗಿತ್ತು.ಅವರ ಮನೋಜ್ಞ ಅಭಿನಯದ ಪರಿಚಯವಾಗಿ ಈ ಕಲಾವಿದನ ಮೇಲೆ ಇನ್ನೂ ಹೆಚ್ಚಿನ ಗೌರವ ನನ್ನಲ್ಲಿ ಮೂಡಿತು.



ಮೈಸೂರಿನ ಹೆಮ್ಮೆಯ ಪುತ್ರ

ಮೈಸೂರಿನ ಚಾಮುಂಡಿಪುರಂನಲ್ಲಿ ಹುಟ್ಟಿ ಮೈಸೂರಿಗರಾಗಿ (ಮೂಲತಃ ಮೇಲುಕೋಟೆಯವರಂತೆ) ತಮ್ಮ ಬಹುತೇಕ ಚಿತ್ರಗಳನ್ನು ಮೈಸೂರಿನಲ್ಲೇ ಚಿತ್ರೀಕರಣ ಮಾಡಿಸಿದವರು ನಮ್ಮ ವಿಷ್ಣು.ಆಗಾಗ ಮೈಸೂರಿಗೆ ಬರುತ್ತಿದ್ದ ವಿಷ್ಣು ಅನೇಕ ಸಂದರ್ಭದಲ್ಲಿ ಮೈಸೂರಿನ ಸೊಗಡಿನ ಮೇಲೆ ತಮಗಿರುವ ಪ್ರೀತಿ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.ವಿಷ್ಣು ಮೈಸೂರಿನಲ್ಲೇ ನಿಧನ ಹೊಂದಿದ್ದು ವಿಧಿಯಾಟವೇ ಸರಿ.ಮೈಸೂರಿನ ಹೆಮ್ಮೆಯ ವಿಷ್ಣು ಅವರಿಗೆ ಇಡೀ ಮೈಸೂರೇ ಸ್ವಯಂಪ್ರೇರಣೆಯಿಂದ ಗೌರವ ಸಲ್ಲಿಸುತ್ತಿದೆ.
ವಿಷ್ಣು ಮಾಡಿದ ತಪ್ಪು!
ಇವರು ಬೆಂಗಳೂರಿನ ಜಯನಗರಲ್ಲಿ ನೆಲಸಿ ಅಲ್ಲಿನ ಜನಸಾಮಾನ್ಯರೊಳಗೆ ಒಬ್ಬರಾಗಿ ಬದುಕುತ್ತಾ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದವರು.ಅತ್ಯಂತ ಸರಳ,ಸಜ್ಜನಿಕೆಯ,ಸುಸಂಸ್ಕೃತ ಹಾಗೂ ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆ ನೀಡಿ ಎಲ್ಲಾ ಕಲಾವಿದರೋಟ್ಟಿಗೆ ತಾನೊಬ್ಬನಾಗಿ,ಶಿಸ್ತಿಗೆ ಹೆಸರಾಗಿ,ಯಾವುದೇ ಜಾತಿ,ರಾಜಕೀಯ ಪಕ್ಷಕ್ಕೆ ಅಂಟಿಕೊಳ್ಳದೆ,ಸಮಕಾಲೀನ ಕಲಾವಿದರನ್ನು ತುಳಿಯದೇ,ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ವಿಷ್ಣುವರ್ಧನ್ ಅವರು ತಮ್ಮ ಜೀವನದಲ್ಲಿ ಒಂದೇ ಒಂದು ದೊಡ್ಡ ತಪ್ಪು ಮಾಡಿದರು..... ಅದು ನಮ್ಮೆಲ್ಲರನ್ನೂ ಇಷ್ಟು ಬೇಗ ತೊರೆದು ಹೋದದ್ದು..........
ವಿಷ್ಣು ಸಾರ್ ವಿ ಮಿಸ್ ಯು....



--- ಅಶೋಕ ಉಚ್ಚಂಗಿ

Tuesday, February 3, 2009

**** ಸೊಬಗಿನ ಜಾನಪದ ಜಾತ್ರೆಗಳು....


ಹಳ್ಳಿ ಜಾತ್ರೆಗಳಲ್ಲೊಂದು ಸುತ್ತು....


ನಾನು ಚಿಕ್ಕಂದಿನಲ್ಲಿ ನೋಡಿದ ಜಾತ್ರೆಗಳೆಂದರೆ ಕೊಂಗಳ್ಳಿ ಜಾತ್ರೆ,ಗುಡುಗಳಲೆ ಜಾತ್ರೆ,ಟೆಂಪಲ್ ಜಾತ್ರೆ...ಇತ್ಯಾದಿ. ಊರುಗಳು ಮಲೆನಾಡಿನ ಮಡಿಲಲ್ಲಿವೆ.ಮಲೆನಾಡಿನ ಸಕಲೇಶಪುರ ತಾಲೋಕಿನ ಕೊಂಗಳ್ಳಿ,ಕೊಡಗು ಜಿಲ್ಲೆಯ ಶನಿವಾರಸಂತೆಯ ಸಮೀಪದ ಗುಡುಗಳಲೆ ಜಾತ್ರೆಗಳು ನಮ್ಮ ಪ್ರದೇಶದಲ್ಲಿ ದೊಡ್ಡ ಜಾತ್ರೆಗಳು.
ಸಾಮಾನ್ಯವಾಗಿ ಮಲೆನಾಡಿನ ಜಾತ್ರೆಗಳಲ್ಲಿ ಉತ್ಸವ,ಸುಗ್ಗಿಗಳಿಗೆ ಪ್ರಾಧಾನ್ಯ.ನಾನು ನೋಡಿದ ಕೊಂಗಳ್ಳಿ ಜಾತ್ರೆಯಲ್ಲಿ ಕಾಡಿನ ನಡುವಿರುವ ದೇಗುಲದಲ್ಲಿ ಪೂಜೆ ಸಲ್ಲಿಸಿ,ಅಥವಾ ಹರಕೆ ತೀರಿಸಿ ದೇಗುಲದ ಸಮೀಪದಲ್ಲಿನ ಡೇರೆಗಳಲ್ಲಿ ಸಿಗುತ್ತಿದ್ದ ಪೀಪಿ,ಬಲೂನು,ಸಿಹಿತಿಂಡಿಗಳು,ಬತ್ತಾಸು,ಪುರಿ,ಕಾರಾಸೇವಿಗೆ,ಬಟ್ಟೆ,ಚಪ್ಪಲಿಗಳನ್ನು ಜಾತ್ರೆಗೆ ಬಂದ ಜನ ಕೊಳ್ಳುತ್ತಿದ್ದರು.ಕಾಡಿನ ನಡುವೆ ನಿರ್ಜನ ದೇಗುಲದೆದುರು ವರ್ಷದಲ್ಲೊಮ್ಮೆ ಸುಮಾರು ಒಂದು ಸಾವಿರ ಜನ ಒಟ್ಟಿಗೆ ಸೇರಿ ಜಾತ್ರೆಯಾಗುತ್ತಿತ್ತು.ಮಲೆನಾಡಿನ ಜಾತ್ರೆ ಬಯಲುಸೀಮೆಯ ವಾರದ ಸಂತೆಗೆ ಸಮವೆನಿಸುತ್ತಿತ್ತು ಎಂದರೆ ತಪ್ಪಾಗಲಾರದು.ಇನ್ನು ಗುಡುಗಳಲೆ ಜಾತ್ರೆ ಒಂದುವಾರಗಳ ಕಾಲ ನಡೆದು ಆಕರ್ಷಕವೆನಿಸುತ್ತಿತ್ತು. ವೇಳೆಯಲ್ಲಿ ಸರ್ಕಸ್,ನಾಟಕಗಳು,ಸಂಚಾರಿ ಸಿನಿಮಾಗಳ ಪ್ರದರ್ಶನವಿರುತ್ತಿತ್ತು.ರಾಟಾಳೆ,ತೊಟ್ಟಿಲುಗಳು ಮಕ್ಕಳಿಗೆ ಪ್ರಿಯವಾಗಿತ್ತು.ಇತ್ತೀಚೆಗೆ ಇವು ತಮ್ಮ ಹಿಂದಿನ ಸೊಗಡನ್ನು ಕಳೆದುಕೊಂಡಿವೆ.
ಇಂದಿನ ದಿನಗಳಲ್ಲಿ ಜಾತ್ರೆಗಳು ನಮ್ಮ ಜನಪದರಿಂದ ದೂರಾಯಿತೇನೋ ಎಂಬ ಭಾವನೆ ನನ್ನದಾಗಿತ್ತು.ಆದರೆ ಬಯಲು ಸೀಮೆಯ ಕೆಲವು ಹಳ್ಳಿ,ಪಟ್ಟಣಗಳಲಿ ಜಾತ್ರೆಯ ಸೊಗಡು ಇನ್ನೂ ಮಾಸಿಲ್ಲ.ಹಿಂದಿನ ವೈಭವ ಈಗಿಲ್ಲವಾದರೂ ತಕ್ಕ ಮಟ್ಟಿಗೆಜಾನಪದ ಜಾತ್ರೆಗಳುಎನಿಸಿಕೊಳ್ಳುತ್ತವೆ.
ನಿನ್ನೆ ರಥಸಪ್ತಮಿಯ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ರಥೋತ್ಸವವಿತ್ತು.ಇಂದು ಅಲ್ಲಿ ಜಾತ್ರೆಯೂ ಸಹ.

ಇಲ್ಲಿನ
ಜಾತ್ರೆ ನೋಡಿದಾಗ ಮನಸ್ಸಿಗೆ ನೆಮ್ಮದಿಯಾಯಿತು.ಕಾರಣ ನಮ್ಮ ಜನಪದರ ಆಟಗಳು,ಆಚರಣೆಗಳು,ತಿಂಡಿತಿನಿಸುಗಳು,ಜಾತ್ರೆ ವಾತಾವರಣ ಇನ್ನೂ ಹಾಗೆ ಉಳಿದಿದೆಯಲ್ಲಾ ಎಂದು ಸಂತಸವಾಯಿತು.
ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇಗುಲದ ಹಾದಿಯ ಇಕ್ಕೆಲದಲ್ಲಿ ಮತ್ತು ಪಕ್ಕದ ವಿಶಾಲ ಅಂಗಳಲ್ಲಿ ಭರ್ಜರಿಯಾಗಿ ಜಾತ್ರೆ ನಡೆಯುತ್ತಿತ್ತು.ಗತಕಾಲದ ನೆನಪಿಗೆ ಸಾಕ್ಷಿಯಂತಿದ್ದ ಜಾತ್ರೆಯಲ್ಲಿ ಒಂದು ಸುತ್ತುಬಂದು ಇಲ್ಲಿನ ವಿಶೇಷತೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆ.ಮಾಸಿದ ನೆನಪಿಗೆ ಹೊಳಪು ನೀಡಿದೆ.
ಪಿಂಗಾಣಿಯ ಭರಣಿ,ಕುಡಿಕೆ,ಜಾಡಿ,ಮಡಿಕೆ-ಕುಡಿಕೆಗಳು,ಟೇಫು-ರಿಬ್ಬನ್ನುಗಳು,ಮಹಿಳೆಯರ ಅಲಂಕಾರಿಕ ವಸ್ತುಗಳು,ಮಕ್ಕಳ ಆಟದ ಸಾಮಾನುಗಳು,ಕಲ್ಲಂಗಡಿ,ಕಬ್ಬು,ಸೊಪ್ಪಿನ ಕಡಲೆ,ಬಣ್ಣಬಣ್ಣದ ಮಿಠಾಯಿಗಳು,ಬೆಂಡುಬತ್ತಾಸುಗಳು,ಹಾವಾಡಿಗರು,ಗಿಣಿಶಾಸ್ತ್ರದವರು,
ಕೋಲೆಬಸವರು
,ವಿಧವಿಧವಾದ ಹಳ್ಳಿ ಗ್ಯಾಂಬ್ಲಿಂಗ್ ಕ್ರೀಡೆಯಲ್ಲಿ ಮುಳುಗಿಹೋಗಿದ್ದ ಹಳ್ಳಿಗರು,ಮಕ್ಕಳು.....ಹೀಗೆ ಗ್ರಾಮ್ಯ ಪ್ರದೇಶದವರಿಗೆ ಇಷ್ಟವಾಗುವ ಪಟ್ಟಣಿಗರಿಂದಲೋಕಲ್ಎಂದೆನಿಸಿಕೊಳ್ಳುವ ಜಾತ್ರೆಯ ಸವಿಯನ್ನು ವ್ಯಕ್ತಿಯಂತೆಯೇ ನಾನೂ ನನ್ನ ಮಗಳನ್ನು ಭುಜದ ಮೇಲೆ ಕೋರಿಸಿಕೊಂಡು ಸುತ್ತಿ ಸವಿದೆ.
ಆದರೆ ನನ್ನ ಮಗಳಿಗೆ ಎಷ್ಟು ಹೇಳಿದರೂ ಅವಳು ಇದನ್ನು ಜಾತ್ರೆ ಎನ್ನುತ್ತಿಲ್ಲ.......ಎಗ್ಜಿಬಿಸನ್...ಎಂದು ಮುದ್ದುಮುದ್ದಾಗಿ ಉಲಿಯುತ್ತಾಳೆ....

ಜಾತ್ರೆ ಚಿತ್ರಗಳು.
ಜನ ಮರುಳೋ....ಜಾತ್ರೆ ಮರುಳೋ......











ಬಳೆ ಎಸೆದು....ಬಲೆ ಹಾಕು...!

ಮಿಠಾಯಿ
ಅಂಗಡಿ.......















Thursday, January 15, 2009

ಮನೆಮುಂದಿನ ಹದ್ದು-ಹುಲಿಯೂರಿನ ಸರ‘ಹದ್ದು"!!!

ಹದ್ದು ಹಾರುತಿದೆ ನೋಡಿದಿರಾ.......?
ಒಂದು ಮಧ್ಯಾನ್ಹ ನೆತ್ತಿ ಸುಡುವ ರಣಬಿಸಿಲಿನಲ್ಲಿ ಮನೆ ಸೇರುವ ವೇಳೆಗೆ ಮೋಡಗಳು ಮುಗಿಲೇರತೊಡಗಿದ್ದವು.
ಹಿಂಜಿದ
ಅರಳೆಯಂತಹ ಮೋಡಗಳ ನಡುವೆಯೇ
ಬಿಸಿಲಿನ
ಝಳ ಜೋರಾಗಿತ್ತು.
ಗೇಟು
ದಾಟಿ ಮನೆ ಅಂಗಳಕ್ಕೆ ಕಾಲಿಟ್ಟಾಗ
ಸಣ್ಣ
ನೆರಳೊಂದು ಸೊಯ್ಯನೆ ಅಂಗಳ ದಾಟಿ ಮನೆಯ
ಗೋಡೆ ಹತ್ತಿ ಮರೆಯಾಯಿತು.ಕತ್ತೆತ್ತಿ ನೋಡಿದೆ.ವಿಶಾಲ ಆಗಸದಲ್ಲಿ ಅರೆಬರೆ ಕವಿದ ಮೋಡಗಳ ನಡುವೆ ಮೂರ್ನಾಲ್ಕು ಹದ್ದುಗಳು ಗಿರಕಿ ಹೊಡೆಯುತ್ತಿದ್ದವು.ಹೀಗೆ ಸುತ್ತುತ್ತಿದ್ದ ಗಿಡುಗವೊಂದು ಕೆಳಗಿಳಿಯ ತೊಡಗಿ ನನ್ನ ಇರುವಿಕೆಯಿಂದ ಮತ್ತೆ ಮೇಲೇರಿದ್ದರ ಪರಿಣಾಮ ನೆರಳು ನನ್ನ ಮುಂದೆ ಸೊಯ್ಯನೆ ಸಾಗಿತ್ತು. ಆದರೆ ವಾಸ್ತವವೇ ಬೇರೆಯಾಗಿತ್ತು.ಹದ್ದು ನನಗೆ ಹೆದರಿ ಮೇಲೆ ಹಾರಲಿಲ್ಲ.ಪಕ್ಕದ ಸೈಟಿನಲ್ಲಿದ್ದ ಹುತ್ತದ ಒಳಗಿನಿಂದ ಮಳೆಹುಳುಗಳು ಹೊರಬಂದು ಹಾರುತ್ತಿದ್ದವು.ಮೇಲೆ
ಸುತ್ತುತ್ತಿದ್ದ ಹದ್ದುಗಳು ಮಳೆಹುಳುಗಳು ಹಾರಿದ್ದೇ ತಡ ಗಾಳಿಯಲ್ಲಿ ತೇಲಿಬಂದು
ಮಳೆಹುಳುಗಳನ್ನು ಹಿಡಿದು ರಾಕೇಟ್ನಂತೆ ಮೇಲೇರುತ್ತಿದ್ದವು.ಹದ್ದುಗಳು ಮಳೆಹುಳುಗಳ ಗುಳಂ ಮಾಡುವ ಪರಿಯನ್ನು ನೋಡುತ್ತಿದ್ದ ನನಗೆ
ತೇಜಸ್ವಿಯವರ "ಹುಲಿಯೂರಿನ ಸರಹದ್ದು" ಕಥೆ ನೆನಪಾಯಿತು.
ಕಥೆಗೂ ವಾಸ್ತವಕ್ಕೂ ಇದ್ದ ವ್ಯತ್ಯಾಸ ಇಷ್ಟೆ.ಇಲ್ಲಿ ಹದ್ದು ಮಳೆಹುಳ ಭಕ್ಷಣೆಗೆ
ಆಗಸದಲ್ಲಿ ಸುತ್ತುತ್ತಿದೆ.ಹುಲಿಯೂರಿನ ಸರಹದ್ದಿನಲ್ಲಿ ಮಳೆಹುಳುಗಳನ್ನು ಹಿಡಿಯುವುದರಲ್ಲಿ ಮಗ್ನವಾದ ಕೋಳಿಪಿಳ್ಳೆಗಳನ್ನು ಹಿಡಿಯಲು ಗರುಡ ಹೊಂಚು ಹಾಕುತ್ತಿತ್ತು.ಇಲ್ಲಿ ನಡೆಯುತ್ತಿದ್ದ ಮಳೆಹುಳುಗಳ ಬೇಟೆ,ಇಲ್ಲಿನ ವಾತಾವರಣ ತೇಜಸ್ವಿಯವರ ಕಥನದ ರೂಪಕದಂತಿತ್ತು.ಇಲ್ಲಿನ ಸನ್ನಿವೇಶವನ್ನು ಗಮನಿಸಿದಾಗ ತೇಜಸ್ವಿಯವರು ನಿಸರ್ಗದ ಸಣ್ಣ ಸಣ್ಣ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಷ್ಟು ಚೆನ್ನಾಗಿ ಅನುಭವಿಸಿ ಬರೆದಿದ್ದಾರೆ ಎಂದೆನಿಸಿತು. ತೇಜಸ್ವಿಯವರ ಹುಲಿಯೂರಿನ ಸರಹದ್ದಿನಲ್ಲಿ ಬರುವ ಘಟನೆಗಳಿಗೂ ನಮ್ಮ ಮನೆಯ
ಮುಂದಿನ ನಿಸರ್ಗದ ವ್ಯಾಪಾರಕ್ಕೂ ಬಹಳಷ್ಟು
ಸಾಮ್ಯತೆಯಿತ್ತು
.
ಆದಕಾರಣ
ತೇಜಸ್ವಿಯವರ
ಭಾಷೆಯನ್ನು ಅಲ್ಲಲ್ಲಿ ಬಳಸಿ ನಮ್ಮ
ಮನೆಯಂಗಳದ
ಕಥೆಯನ್ನು ಹೇಳುತ್ತೇನೆ ಕೇಳಿ.
ವರ್ತುಳ,ವರ್ತುಳ,ವರ್ತುಳವಾಗಿ ಹದ್ದುಗಳ
ನೆರಳು
ಧಡೀರನೆ ಮನೆಯ ಮುಂದೆಲ್ಲಾ ಬಿದ್ದು,
ಧಿಗ್ಗನೆ ಮನೆಯ ಗೋಡೆಯೇರಿ,ಆಗಸದಿಂದ ಜುಣುಗಿ
ಇಳಿದ
ಅರೆಬರೆ ಬಿಸಿಲಿನಲ್ಲೇ ತನ್ನ ಮೇರೆಯನ್ನು ನಿರ್ದೇಶಿಸುತ್ತಿತ್ತು.ಮೇಲೆ,ಬಹುಮೇಲೆ ಒಂದೆರಡು ಗರುಡಗಳು ಹಾಯಾಗಿ ರೆಕ್ಕೆಯನ್ನು ಬಿಚ್ಚಿಕೊಂಡು ಸುತ್ತೀ ಸುತ್ತೀ ಸುತ್ತೀ ತೇಲುತ್ತಿತ್ತು.ಮಳೆಹುಳುಗಳು ಸುಮಾರು ಹದಿನೈದು ಅಡಿ
ಎತ್ತರದಲ್ಲಿ ಹಾರುವುದೇ ತಡ ಎಲ್ಲಿಂದಲೋ ಒಂದು ಹದ್ದು ಹಾರಿಬಂದು ಅಂತರಿಕ್ಷದಲ್ಲೇ ಫಳಾರ ಮಾಡುತ್ತಿತ್ತು.
ಕತ್ತಲು ತುಂಬಿದ್ದ ಶೂನ್ಯಬಿಲದ ಬಾಯೊಳಗಿನಿಂದ ಒಮ್ಮೆಲೆ ನಾಲ್ಕೈದು ಹುಳಗಳು
ಹೊರಹಾರಿದಂತೆ ಮೂರ್ನಾಲ್ಕು ಗಿಡುಗಗಳೂ ಆಗಸದಿಂದ ತೇಲಿಬಂದು ಹುಳಗಳನ್ನು ಹಿಡಿದು
ತಿನ್ನುವ ಭರಾಟೆಯಲ್ಲಿ ಒಂದಕ್ಕೊಂದು ಢಿಕ್ಕಿ ಹೊಡೆಯುತ್ತವೇನೋ ಎಂದುಕೊಳ್ಳುವಷ್ಟರಲ್ಲಿ ದಿಕ್ಕು ಬದಲಿಸಿ ಗಾಳಿಯಲ್ಲಿ ಮೇಲೇರುತ್ತಿದ್ದವು.ಮಂದಗತಿಯಲ್ಲಿ ಹಾರುವ ಮಳೆಹುಳುಗಳನ್ನು ಹದ್ದುಗಳು ತಮ್ಮ
ಕೊಕ್ಕೆಯಂತಹ ಕಾಲುಗುರುಗಳ ನಡುವೆ ಅಮುಕಿ ಹಿಡಿದು ಹಾರುತ್ತಲೇ ಅಂತರಿಕ್ಷದಲ್ಲೇ ಗುಳಂ ಮಾಡುತ್ತಿದ್ದವು. ದುರಂತದ ಪ್ರತೀಕದಂತೆ ಮಳೆಹುಳುಗಳ ರೆಕ್ಕೆಗಳು ಮೆಲುಗಾಳಿಯಲ್ಲಿ ನವುರಾಗಿ ನರ್ತಿಸುತ್ತಾ,ಬಿಸಿಲಿಗೆ ಹೊಳೆಯುತ್ತಾ ನಿಧಾನವಾಗಿ ಭೂಸ್ಪರ್ಶಿಸುತ್ತಿದ್ದವು. ಅತ್ತ ವಿದ್ಯುತ್ ತಂತಿಯ ಮೇಲೆ ಮೈನಾಹಕ್ಕಿಗಳು,ಕಾಗೆಗಳು ಹದ್ದುಗಳ ಹಾರಾಟಕ್ಕೆ ಹೆದರಿ ಕುಳಿತು ಮಳೆಹುಳು ಮತ್ತು ಗೆದ್ದಲು ಹುಳುಗಳು ಬುಳುಬುಳು ಹೊರನುಗ್ಗುತ್ತಿದ್ದ ತೂತೊಂದರ ಕಡೆಗೇ ಆಸೆಗಣ್ಣಿನಿಂದ ನೋಡುತ್ತಿದ್ದವು.ಹದ್ದುಗಳು ಎತ್ತರದಲ್ಲಿ ತೇಲುತ್ತಿದ್ದಾಗ ತಗ್ಗಿನಲ್ಲಿ ಹಾರುವ ಮಳೆಹುಳುಗಳನ್ನು ಸ್ವಾಹಾ ಮಾಡಲು
ಹಕ್ಕಿಗಳಲ್ಲಿ ಪೈಪೋಟಿ ನಡೆಯುತ್ತಿತ್ತು.ತಮ್ಮ ಆಹಾರ ಇತರರ ಪಾಲಾದಿತೆಂದು ಒಂದನ್ನೊಂದು ಹೆದರಿಸಿ ಓಡಿಸುವ ಕಾರ್ಯದಲ್ಲಿ ಹಕ್ಕಿಗಳು ಮಗ್ನವಾಗಿದ್ದವು.
ನಮ್ಮ ಮನೆಯ ಮೇಲೆ ಹಾರುತ್ತಿದ್ದ ಹದ್ದುಗಳಿಗೆ ಮಳೆಹುಳುಗಳ ಭೋಜನ ಬೇಜಾರಾಯಿತೋ ಅಥವಾ
ಇನ್ನೇಲ್ಲಾದರೂ ಭೂರಿಭೋಜನದ ಸುಳಿವು ಸಿಕ್ಕಿತೋ ಅಂತೂ ನಮ್ಮ ಮನೆಯ ಮೇಲಿಂದ ಮರೆಯಾದವು.ಬಳಿಕ ಕಾಗೆ,ಮೈನಾ,ಮಿಂಚುಳ್ಳಿಗಳು ಮಳೆಹುಳುಗಳ ಶಿಖಾರಿಯಲ್ಲಿ ಮಗ್ನರಾದವು.ನಿಸರ್ಗದ ಆಹಾರ ಚಕ್ರದಲ್ಲಿ ಕೊಂಚ ತಡವಾದರೂ ಸಣ್ಣ ಹಕ್ಕಿಗಳಿಗೆ ಅವುಗಳ ಪಾಲು ಸಿಕ್ಕಿತ್ತು.
*** ಅಶೋಕ ಉಚ್ಚಂಗಿ ***