Wednesday, November 30, 2011

ಮಕ್ಕಳು ಹಿಡಿಯೋರು ಬಂದಿದ್ದಾರಂತೆ....


ಮಕ್ಕಳ ಹಿಡಿಯೋರು....!

ಯಾರು ಹೇಳ್ತಾರೋ....ಯಾವಾಗ ಹೇಳ್ತಾರೋ ಗೊತ್ತಿಲ್ಲ.....ಮಕ್ಕಳು ಇದ್ದಕ್ಕಿದ್ದಂತೆ ಈ ಗಾಳಿಸುದ್ದಿಯನ್ನು ಒಬ್ಬರಿಂದ ಒಬ್ಬರಿಗೆ ಹರಡಿ ಹೆದರಿ ಕಂಗಾಲಾಗುತ್ತವೆ...ಇತರ ಮಕ್ಕಳನ್ನು ಚಿಂತೆಯ ಕಡಲಲ್ಲಿ ತೇಲಿಸುತ್ತವೆ...

ಮಕ್ಕಳು ಹಿಡಿಯೋರು ಬಂದಿದ್ದಾರಂತೆ....ಅಜ್ಜಿ ಹೇಳಿದ್ರು..ಹೊರಗೆಲ್ಲೂ ಹೋಗ್ಬೇಡ ಅಂತ.....
ಮಕ್ಕಳು ಹಿಡಿಯೋರು ಬಂದಿದ್ದಾರಂತೆ....ನಾನಂತೂ ಆಟಕ್ಕೆ ಬರೋಲ್ಲಪ್ಪಾ......
ಆಕಡೆ ಬೀದಿಯ ಶ್ವೇತನ್ನಾ ಮಕ್ಕಳು ಹಿಡಿಯೋರು ಹಿಡ್ಕೊಂಡು ಹೋಗಿದ್ರಂತೆ.....ಅವರಪ್ಪಾ ಪೋಲಿಸಿಗೆ ಹೇಳಿ ಬಿಡಿಸಿ ಕೊಂಡು ಬಂದ್ರಂತೆ....
ಹೀಗೆ ಗುಸುಗುಸು ಆಗಾಗ ಮಕ್ಕಳ ಬಾಯಲ್ಲಿ ಕೇಳಿಬರುತ್ತವೆ....

ಮೊನ್ನೆ ಹೀಗಾಯ್ತು..ಹೊನ್ನಾವರದ ಹತ್ತಿರದ ಹಳ್ಳಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದೆ,ಶಾಲೆ ಬಿಟ್ಟ ಸಮಯ,ಇಳಿ ಬಿಸಿಲು,ಹಸಿರು ಹೊದ್ದ ಹಾದಿ,ನೆರಳು ಬೆಳಕಿನಾಟ.....
ಇಂತಹ ಹಿತಕರ ಸನ್ನಿವೇಶದಲ್ಲಿ....ಶಾಲೆಯಿಂದ ಮನೆಯತ್ತ ಹೊರಟ ಮಕ್ಕಳು ರಸ್ತೆಯ ತುಂಬಾ ಆಟವಾಡುತ್ತಾ ಬರುತ್ತಿದ್ದರೆ...ಕ್ಯಾಮೆರಾ ಎತ್ತದೆ ಸುಮ್ಮನಿರಲಾದೀತೇ....?
ಸೂಕ್ತ ಜಾಗ ನೋಡಿ ಮಕ್ಕಳ ಚಿತ್ರ ತೆಗೆಯಲು ಅಣಿಯಾಗುತ್ತಿದ್ದಂತೆ ನನ್ನನ್ನು ಗಮನಿಸಿದ ಪೋರಿಯೊಬ್ಬಳು ಏ..ಮಕ್ಕಳು ಹಿಡಿಯೋರು......ಓಡಿ...ಓಡಿ....ಎಂದೊಡನೇ ಇಲ್ಲಾ ಮಕ್ಕಳು ಬಂದದಾರಿಯಲ್ಲೇ ತಿರುಗಿ ಓಡಿ ಬಿಡೋದೆ..!

ನಾನು ಮುನ್ನಡೆದಂತೆಲ್ಲಾ ಅವು ಇನ್ನೂ ಜೋರಾಗಿ ಓಡ ತೊಡಗಿದವು! ಕ್ಯಾಮೆರಾ ಚೀಲಕ್ಕೆ ಸೇರಿಸಿದೆ...ರಸ್ತೆಯಂಚಲ್ಲಿ ಸ್ವಲ್ಪ ಹೊತ್ತು ನಿಂತೆ..ಉಹೂಂ...ಮಕ್ಕಳು ಮಾತ್ರ ಮನೆಯ ಹಾದಿಗೆ ಮರಳಲಿಲ್ಲ!

ನಾನಂತೂ ಮುಂದೆ ಸಾಗ ಬೇಕಿತ್ತು...ಇವು ಹೀಗೆ ಓಡುತ್ತಲೇ ಹೋದರೆ.... ಕತ್ತಲಾದರೆ ಮಕ್ಕಳು ತಿರುಗಿ ಮನೆ ಸೇರುವ ಬಗೆ ಹೇಗೆ ಎಂಬ ಚಿಂತೆಯೂ ಕಾಡಿತು...
ದಿಗಿಲಿನಿಂದ ಓಡುತ್ತಿರುವ ಮಕ್ಕಳನ್ನು ನೋಡಿ ಯಾರಾದರು ನಾನು ನಿಜವಾಗಿಯೂ ನಾನು ಮಕ್ಕಳ ಕಳ್ಳನೆಂದು ತಿಳಿದು ನನಗೆ ತದುಕಿದರೆ..ಎಂಬ ಚಿಂತೆಯೂ ಮೂಡಿತು..ಅಪರಿಚಿತ ಸ್ಥಳ ಬೇರೆ!
ಮಕ್ಕಳು ಓಡುತ್ತಿದ್ದವು,,ನಾನು ನಿಂತೂ ನಿಂತೂ ನಿಧಾನವಾಗಿ ನಡೆಯಡಗಿದೆ....ಸುಮಾರು ಒಂದು ಕಿಮೀ ಸಾಗಿರಬೇಕು...ಅಬ್ಬಾ ರಸ್ತೆಯಂಚಿನ ತಗ್ಗಿನಲ್ಲಿ ಶಾಲೆಯಿತ್ತು...ಮಕ್ಕಳು ಶಾಲೆಗೆ ಹಿಂತಿರುಗಿವೆ ಎಂದು ಸ್ಪಷ್ಟವಾಯ್ತು.....ಹಾಗೆಯೇ ಆಗಿರಲಿ ಎಂದು ಹರಸಿ ವೇಗವಾಗಿ ಮುಂದೆ ಸಾಗತೊಡಗಿದೆ....ಶಾಲೆಯೊಳಗಿನಿಂದ ಏ..ನೋಡ್ರೇ....ಮಕ್ಕಳ ಕಳ್ಳ ಓಡ್ತಾಯಿದ್ದಾನೆ...ಎಂದು ಕಿರುಚಿತ್ತಿರುವುದು ಕೇಳುತ್ತಿತ್ತು....ನನ್ನ ಪರಿಸ್ಥಿತಿಗೆ ನನಗೇ ನಗು ಬಂತು...ಜೋರಾಗಿ ನಗುತ್ತಾ ಮುಂದೆ ಸಾಗ ತೊಡಗಿದೆ....

Thursday, November 24, 2011

ಬತ್ತದ ಹಾಲು








ಪ್ರಿಯರೇ..... ಗದ್ದೆ ಹೊಡೆಯಾಗಿ,ಬತ್ತದ ಹಾಲು ಅಕ್ಕಿಯಾಗುವ ಈ ಸಮಯದಲ್ಲಿ ನಿಸರ್ಗವನ್ನು ನೋಡುವುದೇ ಆನಂದ.ಬತ್ತದ ಗದ್ದೆಯಲ್ಲಿ ಸುಯ್ಯಿಗೊಡುವ ಮೂಡಲ ಗಾಳಿ,ನಿರ್ಮಲ ಆಗಸದಲ್ಲಿ ಅಸ್ತಂಗತನಾಗುತ್ತಿರುವ ನೇಸರ,ಸಣ್ಣಗೆ ಸದ್ದು ಮಾಡುತ್ತಾ ಹರಿವ ತೊರೆ,ಹಸಿರು ಹುಲ್ಲೂ ಕೆಂಪಾಗಿ ತೆನೆಬಿಟ್ಟ ಈ ದಿನಗಳೆಂದ್ರೆ ನನಗಿಷ್ಟ ಜೊತೆಗೆ ಏನೋ ಕಳೆದುಕೊಂಡಂತೆ ಘಾಸಿಯಾಗುವ ಮನಸ್ಸು.ಕಾರಣ ನನಗಂತೂ ಗೊತ್ತಿಲ್ಲ.ಈ ಬಗ್ಗೆ ಯೋಚಿಸಿದರೆ ಹೊಳೆಯುವುದು ನೂರಾರು ಕಾರಣ.ಪ್ರತಿವರ್ಷವೂ ಈ ವೇಳೆಗೆ ಸರಿಯಾಗಿ ನನ್ನ ಮನಸ್ಸಿನಲ್ಲಾಗುವ ಹೋಯ್ದಾಟ ನನಗೇ ಅಚ್ಚರಿಯನ್ನುಂಟು ಮಾಡುತ್ತದೆ!

Tuesday, January 4, 2011

ಚಳಿಯ ಬೆಳಗು!!



ಚಳಿಯ ಛಳಕು!

ಚಳಿಗಾಲ ಮಳೆಗಾಲದಂತಿಲ್ಲ.ಆಗಾಗ ಕೊರೆವ ಚಳಿ,ಎಲ್ಲೋ ಒಂದೆರಡು ದಿನ ಬಿದ್ದ ಹಿಮ,ಆದರೂ ಚಳಿಗಾಲದ ಬೆಳಗಿನ ನೋಟ ವಿಭಿನ್ನವೇ ಸರಿ.ಹಾಲಿನವ ಇಷ್ಟು ಮುಂಚೆ ಏಕೆ ಬರುತ್ತಾನೋ ಎಂದು ಬೈದುಕೊಳ್ಳುವ ಕಾಲವಿದು.ಪ್ಯಾಕೇಟ್ ಹಾಲಾದರೆ ಎಷ್ಟು ಹೊತ್ತಿಗಾದರೂ ಸಿಗುತ್ತೇ ಅದೇ ಸರಿ ಎನ್ನುವ ಸೋಮಾರಿ ಮನಸ್ಸು.ಬೈಗಿನಲ್ಲಿ ಹೊರಟು ಸುಖ ನಿದ್ರೆ ಕೆಡಿಸುವ ಹಾಲಪ್ಪ,ಹಾಲಮ್ಮಂದಿರಿಗೆ ಈ ಫೋಟೋ ಅರ್ಪಣೆ!!