Tuesday, December 2, 2008

ಮೈಸೂರು ಮಲ್ಲಿಗೆಯ ಮೊದಲ ಮೊಗ್ಗು

ಪ್ರಿಯರೆ...
ಕನ್ನಡದ ಹೆಮ್ಮೆಯ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿಯವರು ಮೈಸೂರು ಮಲ್ಲಿಗೆ ಕವನ
ಸಂಕಲನದಲ್ಲಿ ಹೀಗೆ ಹೇಳುತ್ತಾರೆ...
ಮೈಸೂರೆನ್ನಿ,ಕನ್ನಡವೆನ್ನಿ
ಮಲ್ಲಿಗೆಯೆನ್ನಿ,ಒಂದೆ!
ಮೈಸೂರಿನ ಹೆಸರಿಗೆ ಅಂಟಿಕೊಂಡು ಜಗದ್ವಿಖ್ಯಾತವಾದ ಮಲ್ಲಿಗೆಗೆ ಮೈಸೂರಿನಷ್ಟೆ,ಕನ್ನಡದಷ್ಟೆ ಪ್ರಮುಖ ಸ್ಥಾನವಿದೆ.ಮೈಸೂರೆಂದರೆ ಸಾಕು ಮಲ್ಲಿಗೆಯ ಕಂಪು ಮನಸ್ಸಿನಲ್ಲಿ ಹರಿದಾಡುತ್ತದೆ.
ಮೈಸೂರನ್ನಾಳಿದ ರಾಜಮಹರಾಜರುಗಳಿಂದಾಗಿ ಮೈಸೂರು ದಸರ,ಮೈಸೂರು ಪೇಟ,ಮೈಸೂರು ಪಾಕ್,ಮೈಸೂರು ಟಾಂಗ,ಮೈಸೂರು ರೇಷ್ಮೆ,ಮೈಸೂರು ಸ್ಯಾಂಡಲ್ ಪ್ರಸಿದ್ದಿಯಾದವು.ಆದರೆ ಮೈಸೂರಿನ ರೈತಾಪಿವರ್ಗದ
ಮನೆಯಂಗಳದಲ್ಲಿ ಬೆಳೆದು ಮಾರುಕಟ್ಟೆ ಸೇರಿ ಮಹಿಳೆಯರ ಮುಡಿಯಲ್ಲಿ,ದೇವರ ಗುಡಿಯಲ್ಲಿ ಮಲ್ಲಿಗೆ ಸ್ಥಾನ ಪಡೆದದ್ದು ತನ್ನ ಸೌರಭದಿಂದಲೇ! ತನ್ನ ಚಲುವಿನಿಂದಲೇ! ಕಾರಣದಿಂದಲೇ ಜಾಗತಿಕವಾಗಿ ಮಲ್ಲಿಗೆಗೆ ವಿಶಿಷ್ಟ ಸ್ಥಾನವಿದೆ.ಮನೆಯಂಗಳದ
ಗಿಡದ
ಮೇಲೆ ಜಾರಿದ ನಕ್ಷತ್ರಗಳಂತೆ ಕಂಡು ಸುತ್ತೆಲ್ಲಾ ಸೌರಭವನ್ನು ಸೂಸುವಮಲ್ಲಿಗೆಯ ಅಂದಕ್ಕ ಮರುಳಾಗಿ ಕೆಎಸ್
ತಮ್ಮ
ಕವನ ಸಂಕಲನಕ್ಕೆ ಮೈಸೂರು ಮಲ್ಲಿಗೆ ಎಂದು ಹೆಸರಿಟ್ಟರೇನೋ? ಕೆಎಸ್ನರ ಮೈಸೂರು ಮಲ್ಲಿಗೆ ಕವನ ಸಂಕಲನದ ಜನಪ್ರಿಯತೆಯೂ ಇದೇ ಹೆಸರಿನ ಸಿನಿಮವೂಮಲ್ಲಿಗೆ ಮತ್ತಷ್ಟು ಜನಪ್ರಿಯವಾಗಲು ಕಾರಣವಾಯಿತೆಂದರೆ ತಪ್ಪಾಗಲಾರದು.
ಆದರೆ ಇಂಥ ಜನಾನು ಇದ್ದಾರೆ ನೋಡಿ.ತಾವು ತೆಗೆದ ನೀಲಿಚಿತ್ರಕ್ಕೆ ಮೈಸೂರು ಮಲ್ಲಿಗೆ ಎಂದು ಹೆಸರಿಟ್ಟು ಮೈಸೂರು ಮಲ್ಲಿಗೆಯ ಕಂಪಿಗೆ ಕಳಂಕ ತಂದರಿವರು.ಇವರು ಏನಾದರೂ ಮಾಡಿಕೊಳ್ಳಲಿ ಇದೇ ಹೆಸರು ಇವರಿಗೂ ಹೊಳೆಯಬೇಕಿತ್ತೇ?ಇಂದು ಅಂತರ್ಜಾಲದಲ್ಲಿ ಮಲ್ಲಿಗೆ ತನ್ನ ಪರಿಮಳಕ್ಕಿಂತ ಹೆಚ್ಚಾಗಿ ದುರ್ನಾತ ಹೊಡೆಯುತ್ತಿದೆ.ಮೈಸೂರು ಮಲ್ಲಿಗೆ ಸುವಾಸನೆಗಿಂತ ದುರ್ವಾಸನೆಗೇ ಅಂತರ್ಜಾಲದಲ್ಲಿ ಮೊದಲ ಸ್ಥಾನ ಸಿಕ್ಕಿದೆ.ನಾನು ನನ್ನ ಬ್ಲಾಗಿಗೆಮೈಸೂರು ಮಲ್ಲಿಗೆಎಂದು ನಾಮಕರಣ ಮಾಡುವಾಗಲೂ ಸಾವಿರ ಸಲ ಯೋಚಿಸಿದ್ದೇನೆ.ಈಗ್ಗೆ ಸುಮಾರು ವರ್ಷಗಳ ಹಿಂದೆ ಸಿಡಿ ಮೈಸೂರು ಮಲ್ಲಿಗೆಯೆಂದು ನಾಮಕರಣವಾಗಿ ಹೊರಬಂದಾಗ ಯಾರು ಪ್ರತಿಭಟಿಸದೇ ಇದ್ದದ್ದು ಆಶ್ಚರ್ಯಕರ.
ನಾನು ಮೈಸೂರು ಮಲ್ಲಿಗೆ ಎಂದು ಹೆಸರಿಡಲು ಕಾರಣವಾದರೂ ಏನು? ಇದಕ್ಕೆ ನಾನು ಕಂಡುಕೊಂಡ ಕಾರಣಗಳು ಬಹಳ.ಒಂದೆರಡನ್ನಷ್ಟೇ ಇಲ್ಲಿ ತಿಳಿಸುತ್ತೇನೆ.ನಾನು ಹುಟ್ಟಿ ಬೆಳೆದದ್ದು ಹಾಸನಜಿಲ್ಲೆ ಸಕಲೇಶಪುರ ತಾಲೂಕಿನ ಮಲೆನಾಡಿನ ಹಳ್ಳಿ ಉಚ್ಚಂಗಿಯಲ್ಲಿ.ಇದು ನನ್ನ ತವರು.ಹತ್ತನೇ ತರಗತಿಯವರಗೆ ಕನ್ನಡ
ಶಾಲೆಯಲ್ಲಿ
ಕಲಿಸಿ ನನ್ನನ್ನು ಬೆಳೆಸಿದ್ದು ನನ್ನೂರು. ನಂತರ ನನ್ನನ್ನು ಬೌದ್ದಿಕವಾಗಿ ಬೆಳೆಸಿದ್ದು ಮೈಸೂರು.ನನ್ನ ಬಾಲ್ಯದ ಹದಿನೈದು ವರ್ಷಗಳು ಮಲೆನಾಡಿನ ಮಡಿಲಲ್ಲಿ ಸಾಗಿದರೆ ನಂತರದ ಹದಿನೈದು ಪ್ಲಸ್ ವರ್ಷಗಳು ಮೈಸೂರಿನಲ್ಲಿ ಸಾಗುತ್ತಿದೆ.ಮೈಸೂರಿನ ಬೆಳವಣಿಗೆಯನ್ನು ಗಮನಿಸುತ್ತಾ ನಾನು ಬೆಳೆಯುತ್ತಿದ್ದೇನೆ.ನನ್ನೂರಿನ ಪ್ರಕೃತಿ ಹೊರತುಪಡಿಸಿದರೆ ಇಲ್ಲಿನ ಇತರ ಸಂಗತಿಗಳು ನನ್ನ ಗಮನಕ್ಕೆ ಬರುವುದಿಲ್ಲ (ಸಕಲೇಶಪುರ ತಾಲೂಕಿನ ಶಾಸಕರು ಯಾರೆಂದೂ ನನಗೆ ಗೋತ್ತಿಲ್ಲ).ನಾನು ನನ್ನ ಹುಟ್ಟೂರನ್ನು ಬಹುವಾಗಿ ಪ್ರೀತಿಸುತ್ತೇನೆ.ಇದರಲ್ಲಿ ಯಾವುದೇ ಸಂಶಯವೂ ಇಲ್ಲ.ಆದರೆ ಮೈಸೂರಿನ ಪರಿಸರ ನನಗೆ ಚಿರಪರಿಚಿತ.ಮೈಸೂರು ನನ್ನ ಬದುಕಿನ ಬಹುದೊಡ್ಡ ಭಾಗವಾಗಿದೆ.ಹೀಗೆ ಮೈಸೂರು ನನ್ನ ಎರಡನೇ ತವರಾದ್ದರಿಂದ, ನನ್ನ ಅರಿವಿಗೆ ಬರುವ ಸಂಗತಿಗಳೂ ಮೈಸೂರಿನ ಪರಿಸರದ್ದೂ ಆಗಿರುವುದರಿಂದ,
ಮೈಸೂರಿನ ಸಂಸ್ಕೃತಿ ನನ್ನ ಬಾಳಿಗೆ ಒಗ್ಗಿರುವುದರಿಂದ,ಮೈಸೂರೆಂದರೆ ಮಲ್ಲಿಗೆಯ ಕಂಪು ಎಲ್ಲರನ್ನೂ ಆವರಿಸುವುದರಿಂದ ನನ್ನ ಬ್ಲಾಗಿನ ಹೆಸರುಮೈಸೂರು ಮಲ್ಲಿಗೆಯಾಗಿದೆ.
ಇದು ಮೈಸೂರು ಮಲ್ಲಿಗೆಯ ಮೊದಲ ಮೊಗ್ಗು.ನಿಮ್ಮ ಅಭಿಪ್ರಾಯ ತಿಳಿಸಿ.
---ಅಶೋಕ ಉಚ್ಚಂಗಿ