
ಹಿಂಜಿದ ಅರಳೆಯಂತಹ ಮೋಡಗಳ ನಡುವೆಯೇ
ಬಿಸಿಲಿನ ಝಳ ಜೋರಾಗಿತ್ತು.
ಗೇಟು ದಾಟಿ ಮನೆ ಅಂಗಳಕ್ಕೆ ಕಾಲಿಟ್ಟಾಗ
ಸಣ್ಣ ನೆರಳೊಂದು ಸೊಯ್ಯನೆ ಅಂಗಳ ದಾಟಿ ಮನೆಯ
ಗೋಡೆ ಹತ್ತಿ ಮರೆಯಾಯಿತು.ಕತ್ತೆತ್ತಿ ನೋಡಿದೆ.ವಿಶಾಲ ಆಗಸದಲ್ಲಿ ಅರೆಬರೆ ಕವಿದ ಮೋಡಗಳ ನಡುವೆ ಮೂರ್ನಾಲ್ಕು ಹದ್ದುಗಳು ಗಿರಕಿ ಹೊಡೆಯುತ್ತಿದ್ದವು.ಹೀಗೆ ಸುತ್ತುತ್ತಿದ್ದ ಗಿಡುಗವೊಂದು ಕೆಳಗಿಳಿಯ ತೊಡಗಿ ನನ್ನ ಇರುವಿಕೆಯಿಂದ ಮತ್ತೆ ಮೇಲೇರಿದ್ದರ ಪರಿಣಾಮ ನೆರಳು ನನ್ನ ಮುಂದೆ ಸೊಯ್ಯನೆ ಸಾಗಿತ್ತು. ಆದರೆ ವಾಸ್ತವವೇ ಬೇರೆಯಾಗಿತ್ತು.ಹದ್ದು ನನಗೆ ಹೆದರಿ ಮೇಲೆ ಹಾರಲಿಲ್ಲ.ಪಕ್ಕದ ಸೈಟಿನಲ್ಲಿದ್ದ ಹುತ್ತದ ಒಳಗಿನಿಂದ ಮಳೆಹುಳುಗಳು ಹೊರಬಂದು ಹಾರುತ್ತಿದ್ದವು.ಮೇಲೆ
ಸುತ್ತುತ್ತಿದ್ದ ಹದ್ದುಗಳು ಮಳೆಹುಳುಗಳು ಹಾರಿದ್ದೇ ತಡ ಗಾಳಿಯಲ್ಲಿ ತೇಲಿಬಂದು

ಮಳೆಹುಳುಗಳನ್ನು ಹಿಡಿದು ರಾಕೇಟ್ನಂತೆ ಮೇಲೇರುತ್ತಿದ್ದವು.ಹದ್ದುಗಳು ಮಳೆಹುಳುಗಳ ಗುಳಂ ಮಾಡುವ ಪರಿಯನ್ನು ನೋಡುತ್ತಿದ್ದ ನನಗೆ
ತೇಜಸ್ವಿಯವರ "ಹುಲಿಯೂರಿನ ಸರಹದ್ದು" ಕಥೆ ನೆನಪಾಯಿತು.
ಕಥೆಗೂ ವಾಸ್ತವಕ್ಕೂ ಇದ್ದ ವ್ಯತ್ಯಾಸ ಇಷ್ಟೆ.ಇಲ್ಲಿ ಹದ್ದು ಮಳೆಹುಳ ಭಕ್ಷಣೆಗೆ
ಆಗಸದಲ್ಲಿ ಸುತ್ತುತ್ತಿದೆ.ಹುಲಿಯೂರಿನ ಸರಹದ್ದಿನಲ್ಲಿ ಮಳೆಹುಳುಗಳನ್ನು ಹಿಡಿಯುವುದರಲ್ಲಿ ಮಗ್ನವಾದ ಕೋಳಿಪಿಳ್ಳೆಗಳನ್ನು ಹಿಡಿಯಲು ಗರುಡ ಹೊಂಚು ಹಾಕುತ್ತಿತ್ತು.


ಸಾಮ್ಯತೆಯಿತ್ತು.
ಆದಕಾರಣ ತೇಜಸ್ವಿಯವರ
ಭಾಷೆಯನ್ನು ಅಲ್ಲಲ್ಲಿ ಬಳಸಿ ನಮ್ಮ
ಮನೆಯಂಗಳದ ಕಥೆಯನ್ನು ಹೇಳುತ್ತೇನೆ ಕೇಳಿ.
ವರ್ತುಳ,ವರ್ತುಳ,ವರ್ತುಳವಾಗಿ ಹದ್ದುಗಳ
ನೆರಳು ಧಡೀರನೆ ಮನೆಯ ಮುಂದೆಲ್ಲಾ ಬಿದ್ದು,
ಧಿಗ್ಗನೆ ಮನೆಯ ಗೋಡೆಯೇರಿ,ಆಗಸದಿಂದ ಜುಣುಗಿ
ಇಳಿದ ಅರೆಬರೆ ಬಿಸಿಲಿನಲ್ಲೇ ತನ್ನ ಮೇರೆಯನ್ನು ನಿರ್ದೇಶಿಸುತ್ತಿತ್ತು.ಮೇಲೆ,ಬಹುಮೇಲೆ ಒಂದೆರಡು ಗರುಡಗಳು ಹಾಯಾಗಿ ರೆಕ್ಕೆಯನ್ನು ಬಿಚ್ಚಿಕೊಂಡು ಸುತ್ತೀ ಸುತ್ತೀ ಸುತ್ತೀ ತೇಲುತ್ತಿತ್ತು.ಮಳೆಹುಳುಗಳು ಸುಮಾರು ಹದಿನೈದು ಅಡಿ
ಎತ್ತರದಲ್ಲಿ ಹಾರುವುದೇ ತಡ ಎಲ್ಲಿಂದಲೋ ಒಂದು ಹದ್ದು ಹಾರಿಬಂದು ಅಂತರಿಕ್ಷದಲ್ಲೇ ಫಳಾರ ಮಾಡುತ್ತಿತ್ತು.
ಕತ್ತಲು ತುಂಬಿದ್ದ ಶೂನ್ಯಬಿಲದ ಬಾಯೊಳಗಿನಿಂದ ಒಮ್ಮೆಲೆ ನಾಲ್ಕೈದು ಹುಳಗಳು
ಹೊರಹಾರಿದಂತೆ ಮೂರ್ನಾಲ್ಕು ಗಿಡುಗಗಳೂ ಆಗಸದಿಂದ ತೇಲಿಬಂದು ಹುಳಗಳನ್ನು ಹಿಡಿದು

ತಿನ್ನುವ ಭರಾಟೆಯಲ್ಲಿ ಒಂದಕ್ಕೊಂದು ಢಿಕ್ಕಿ ಹೊಡೆಯುತ್ತವೇನೋ ಎಂದುಕೊಳ್ಳುವಷ್ಟರಲ್ಲಿ ದಿಕ್ಕು ಬದಲಿಸಿ ಗಾಳಿಯಲ್ಲಿ ಮೇಲೇರುತ್ತಿದ್ದವು.ಮಂದಗತಿಯಲ್ಲಿ ಹಾರುವ ಮಳೆಹುಳುಗಳನ್ನು ಹದ್ದುಗಳು ತಮ್ಮ

ಕೊಕ್ಕೆಯಂತಹ ಕಾಲುಗುರುಗಳ ನಡುವೆ ಅಮುಕಿ ಹಿಡಿದು ಹಾರುತ್ತಲೇ ಅಂತರಿಕ್ಷದಲ್ಲೇ ಗುಳಂ ಮಾಡುತ್ತಿದ್ದವು. ಈ ದುರಂತದ ಪ್ರತೀಕದಂತೆ ಮಳೆಹುಳುಗಳ ರೆಕ್ಕೆಗಳು ಮೆಲುಗಾಳಿಯಲ್ಲಿ ನವುರಾಗಿ ನರ್ತಿಸುತ್ತಾ,ಬಿಸಿಲಿಗೆ ಹೊಳೆಯುತ್ತಾ ನಿಧಾನವಾಗಿ ಭೂಸ್ಪರ್ಶಿಸುತ್ತಿದ್ದವು. ಅತ್ತ ವಿದ್ಯುತ್ ತಂತಿಯ ಮೇಲೆ ಮೈನಾಹಕ್ಕಿಗಳು,ಕಾಗೆಗಳು ಹದ್ದುಗಳ ಹಾರಾಟಕ್ಕೆ ಹೆದರಿ ಕುಳಿತು ಮಳೆಹುಳು ಮತ್ತು ಗೆದ್ದಲು ಹುಳುಗಳು ಬುಳುಬುಳು ಹೊರನುಗ್ಗುತ್ತಿದ್ದ ತೂತೊಂದರ ಕಡೆಗೇ ಆಸೆಗಣ್ಣಿನಿಂದ ನೋಡುತ್ತಿದ್ದವು.ಹದ್ದುಗಳು ಎತ್ತರದಲ್ಲಿ ತೇಲುತ್ತಿದ್ದಾಗ ತಗ್ಗಿನಲ್ಲಿ ಹಾರುವ ಮಳೆಹುಳುಗಳನ್ನು ಸ್ವಾಹಾ ಮಾಡಲು

ಈ ಹಕ್ಕಿಗಳಲ್ಲಿ ಪೈಪೋಟಿ ನಡೆಯುತ್ತಿತ್ತು.ತಮ್ಮ ಆಹಾರ ಇತರರ ಪಾಲಾದಿತೆಂದು ಒಂದನ್ನೊಂದು ಹೆದರಿಸಿ ಓಡಿಸುವ ಕಾರ್ಯದಲ್ಲಿ ಈ ಹಕ್ಕಿಗಳು ಮಗ್ನವಾಗಿದ್ದವು.
ನಮ್ಮ ಮನೆಯ ಮೇಲೆ ಹಾರುತ್ತಿದ್ದ ಹದ್ದುಗಳಿಗೆ ಮಳೆಹುಳುಗಳ ಭೋಜನ ಬೇಜಾರಾಯಿತೋ ಅಥವಾ
ಇನ್ನೇಲ್ಲಾದರೂ ಭೂರಿಭೋಜನದ ಸುಳಿವು ಸಿಕ್ಕಿತೋ ಅಂತೂ ನಮ್ಮ ಮನೆಯ ಮೇಲಿಂದ ಮರೆಯಾದವು.ಆಬಳಿಕ ಕಾಗೆ,ಮೈನಾ,ಮಿಂಚುಳ್ಳಿಗಳು ಮಳೆಹುಳುಗಳ ಶಿಖಾರಿಯಲ್ಲಿ ಮಗ್ನರಾದವು.ನಿಸರ್ಗದ ಆಹಾರ ಚಕ್ರದಲ್ಲಿ ಕೊಂಚ ತಡವಾದರೂ ಸಣ್ಣ ಹಕ್ಕಿಗಳಿಗೆ ಅವುಗಳ ಪಾಲು ಸಿಕ್ಕಿತ್ತು.
*** ಅಶೋಕ ಉಚ್ಚಂಗಿ ***