Thursday, January 15, 2009

ಮನೆಮುಂದಿನ ಹದ್ದು-ಹುಲಿಯೂರಿನ ಸರ‘ಹದ್ದು"!!!

ಹದ್ದು ಹಾರುತಿದೆ ನೋಡಿದಿರಾ.......?
ಒಂದು ಮಧ್ಯಾನ್ಹ ನೆತ್ತಿ ಸುಡುವ ರಣಬಿಸಿಲಿನಲ್ಲಿ ಮನೆ ಸೇರುವ ವೇಳೆಗೆ ಮೋಡಗಳು ಮುಗಿಲೇರತೊಡಗಿದ್ದವು.
ಹಿಂಜಿದ
ಅರಳೆಯಂತಹ ಮೋಡಗಳ ನಡುವೆಯೇ
ಬಿಸಿಲಿನ
ಝಳ ಜೋರಾಗಿತ್ತು.
ಗೇಟು
ದಾಟಿ ಮನೆ ಅಂಗಳಕ್ಕೆ ಕಾಲಿಟ್ಟಾಗ
ಸಣ್ಣ
ನೆರಳೊಂದು ಸೊಯ್ಯನೆ ಅಂಗಳ ದಾಟಿ ಮನೆಯ
ಗೋಡೆ ಹತ್ತಿ ಮರೆಯಾಯಿತು.ಕತ್ತೆತ್ತಿ ನೋಡಿದೆ.ವಿಶಾಲ ಆಗಸದಲ್ಲಿ ಅರೆಬರೆ ಕವಿದ ಮೋಡಗಳ ನಡುವೆ ಮೂರ್ನಾಲ್ಕು ಹದ್ದುಗಳು ಗಿರಕಿ ಹೊಡೆಯುತ್ತಿದ್ದವು.ಹೀಗೆ ಸುತ್ತುತ್ತಿದ್ದ ಗಿಡುಗವೊಂದು ಕೆಳಗಿಳಿಯ ತೊಡಗಿ ನನ್ನ ಇರುವಿಕೆಯಿಂದ ಮತ್ತೆ ಮೇಲೇರಿದ್ದರ ಪರಿಣಾಮ ನೆರಳು ನನ್ನ ಮುಂದೆ ಸೊಯ್ಯನೆ ಸಾಗಿತ್ತು. ಆದರೆ ವಾಸ್ತವವೇ ಬೇರೆಯಾಗಿತ್ತು.ಹದ್ದು ನನಗೆ ಹೆದರಿ ಮೇಲೆ ಹಾರಲಿಲ್ಲ.ಪಕ್ಕದ ಸೈಟಿನಲ್ಲಿದ್ದ ಹುತ್ತದ ಒಳಗಿನಿಂದ ಮಳೆಹುಳುಗಳು ಹೊರಬಂದು ಹಾರುತ್ತಿದ್ದವು.ಮೇಲೆ
ಸುತ್ತುತ್ತಿದ್ದ ಹದ್ದುಗಳು ಮಳೆಹುಳುಗಳು ಹಾರಿದ್ದೇ ತಡ ಗಾಳಿಯಲ್ಲಿ ತೇಲಿಬಂದು
ಮಳೆಹುಳುಗಳನ್ನು ಹಿಡಿದು ರಾಕೇಟ್ನಂತೆ ಮೇಲೇರುತ್ತಿದ್ದವು.ಹದ್ದುಗಳು ಮಳೆಹುಳುಗಳ ಗುಳಂ ಮಾಡುವ ಪರಿಯನ್ನು ನೋಡುತ್ತಿದ್ದ ನನಗೆ
ತೇಜಸ್ವಿಯವರ "ಹುಲಿಯೂರಿನ ಸರಹದ್ದು" ಕಥೆ ನೆನಪಾಯಿತು.
ಕಥೆಗೂ ವಾಸ್ತವಕ್ಕೂ ಇದ್ದ ವ್ಯತ್ಯಾಸ ಇಷ್ಟೆ.ಇಲ್ಲಿ ಹದ್ದು ಮಳೆಹುಳ ಭಕ್ಷಣೆಗೆ
ಆಗಸದಲ್ಲಿ ಸುತ್ತುತ್ತಿದೆ.ಹುಲಿಯೂರಿನ ಸರಹದ್ದಿನಲ್ಲಿ ಮಳೆಹುಳುಗಳನ್ನು ಹಿಡಿಯುವುದರಲ್ಲಿ ಮಗ್ನವಾದ ಕೋಳಿಪಿಳ್ಳೆಗಳನ್ನು ಹಿಡಿಯಲು ಗರುಡ ಹೊಂಚು ಹಾಕುತ್ತಿತ್ತು.ಇಲ್ಲಿ ನಡೆಯುತ್ತಿದ್ದ ಮಳೆಹುಳುಗಳ ಬೇಟೆ,ಇಲ್ಲಿನ ವಾತಾವರಣ ತೇಜಸ್ವಿಯವರ ಕಥನದ ರೂಪಕದಂತಿತ್ತು.ಇಲ್ಲಿನ ಸನ್ನಿವೇಶವನ್ನು ಗಮನಿಸಿದಾಗ ತೇಜಸ್ವಿಯವರು ನಿಸರ್ಗದ ಸಣ್ಣ ಸಣ್ಣ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಷ್ಟು ಚೆನ್ನಾಗಿ ಅನುಭವಿಸಿ ಬರೆದಿದ್ದಾರೆ ಎಂದೆನಿಸಿತು. ತೇಜಸ್ವಿಯವರ ಹುಲಿಯೂರಿನ ಸರಹದ್ದಿನಲ್ಲಿ ಬರುವ ಘಟನೆಗಳಿಗೂ ನಮ್ಮ ಮನೆಯ
ಮುಂದಿನ ನಿಸರ್ಗದ ವ್ಯಾಪಾರಕ್ಕೂ ಬಹಳಷ್ಟು
ಸಾಮ್ಯತೆಯಿತ್ತು
.
ಆದಕಾರಣ
ತೇಜಸ್ವಿಯವರ
ಭಾಷೆಯನ್ನು ಅಲ್ಲಲ್ಲಿ ಬಳಸಿ ನಮ್ಮ
ಮನೆಯಂಗಳದ
ಕಥೆಯನ್ನು ಹೇಳುತ್ತೇನೆ ಕೇಳಿ.
ವರ್ತುಳ,ವರ್ತುಳ,ವರ್ತುಳವಾಗಿ ಹದ್ದುಗಳ
ನೆರಳು
ಧಡೀರನೆ ಮನೆಯ ಮುಂದೆಲ್ಲಾ ಬಿದ್ದು,
ಧಿಗ್ಗನೆ ಮನೆಯ ಗೋಡೆಯೇರಿ,ಆಗಸದಿಂದ ಜುಣುಗಿ
ಇಳಿದ
ಅರೆಬರೆ ಬಿಸಿಲಿನಲ್ಲೇ ತನ್ನ ಮೇರೆಯನ್ನು ನಿರ್ದೇಶಿಸುತ್ತಿತ್ತು.ಮೇಲೆ,ಬಹುಮೇಲೆ ಒಂದೆರಡು ಗರುಡಗಳು ಹಾಯಾಗಿ ರೆಕ್ಕೆಯನ್ನು ಬಿಚ್ಚಿಕೊಂಡು ಸುತ್ತೀ ಸುತ್ತೀ ಸುತ್ತೀ ತೇಲುತ್ತಿತ್ತು.ಮಳೆಹುಳುಗಳು ಸುಮಾರು ಹದಿನೈದು ಅಡಿ
ಎತ್ತರದಲ್ಲಿ ಹಾರುವುದೇ ತಡ ಎಲ್ಲಿಂದಲೋ ಒಂದು ಹದ್ದು ಹಾರಿಬಂದು ಅಂತರಿಕ್ಷದಲ್ಲೇ ಫಳಾರ ಮಾಡುತ್ತಿತ್ತು.
ಕತ್ತಲು ತುಂಬಿದ್ದ ಶೂನ್ಯಬಿಲದ ಬಾಯೊಳಗಿನಿಂದ ಒಮ್ಮೆಲೆ ನಾಲ್ಕೈದು ಹುಳಗಳು
ಹೊರಹಾರಿದಂತೆ ಮೂರ್ನಾಲ್ಕು ಗಿಡುಗಗಳೂ ಆಗಸದಿಂದ ತೇಲಿಬಂದು ಹುಳಗಳನ್ನು ಹಿಡಿದು
ತಿನ್ನುವ ಭರಾಟೆಯಲ್ಲಿ ಒಂದಕ್ಕೊಂದು ಢಿಕ್ಕಿ ಹೊಡೆಯುತ್ತವೇನೋ ಎಂದುಕೊಳ್ಳುವಷ್ಟರಲ್ಲಿ ದಿಕ್ಕು ಬದಲಿಸಿ ಗಾಳಿಯಲ್ಲಿ ಮೇಲೇರುತ್ತಿದ್ದವು.ಮಂದಗತಿಯಲ್ಲಿ ಹಾರುವ ಮಳೆಹುಳುಗಳನ್ನು ಹದ್ದುಗಳು ತಮ್ಮ
ಕೊಕ್ಕೆಯಂತಹ ಕಾಲುಗುರುಗಳ ನಡುವೆ ಅಮುಕಿ ಹಿಡಿದು ಹಾರುತ್ತಲೇ ಅಂತರಿಕ್ಷದಲ್ಲೇ ಗುಳಂ ಮಾಡುತ್ತಿದ್ದವು. ದುರಂತದ ಪ್ರತೀಕದಂತೆ ಮಳೆಹುಳುಗಳ ರೆಕ್ಕೆಗಳು ಮೆಲುಗಾಳಿಯಲ್ಲಿ ನವುರಾಗಿ ನರ್ತಿಸುತ್ತಾ,ಬಿಸಿಲಿಗೆ ಹೊಳೆಯುತ್ತಾ ನಿಧಾನವಾಗಿ ಭೂಸ್ಪರ್ಶಿಸುತ್ತಿದ್ದವು. ಅತ್ತ ವಿದ್ಯುತ್ ತಂತಿಯ ಮೇಲೆ ಮೈನಾಹಕ್ಕಿಗಳು,ಕಾಗೆಗಳು ಹದ್ದುಗಳ ಹಾರಾಟಕ್ಕೆ ಹೆದರಿ ಕುಳಿತು ಮಳೆಹುಳು ಮತ್ತು ಗೆದ್ದಲು ಹುಳುಗಳು ಬುಳುಬುಳು ಹೊರನುಗ್ಗುತ್ತಿದ್ದ ತೂತೊಂದರ ಕಡೆಗೇ ಆಸೆಗಣ್ಣಿನಿಂದ ನೋಡುತ್ತಿದ್ದವು.ಹದ್ದುಗಳು ಎತ್ತರದಲ್ಲಿ ತೇಲುತ್ತಿದ್ದಾಗ ತಗ್ಗಿನಲ್ಲಿ ಹಾರುವ ಮಳೆಹುಳುಗಳನ್ನು ಸ್ವಾಹಾ ಮಾಡಲು
ಹಕ್ಕಿಗಳಲ್ಲಿ ಪೈಪೋಟಿ ನಡೆಯುತ್ತಿತ್ತು.ತಮ್ಮ ಆಹಾರ ಇತರರ ಪಾಲಾದಿತೆಂದು ಒಂದನ್ನೊಂದು ಹೆದರಿಸಿ ಓಡಿಸುವ ಕಾರ್ಯದಲ್ಲಿ ಹಕ್ಕಿಗಳು ಮಗ್ನವಾಗಿದ್ದವು.
ನಮ್ಮ ಮನೆಯ ಮೇಲೆ ಹಾರುತ್ತಿದ್ದ ಹದ್ದುಗಳಿಗೆ ಮಳೆಹುಳುಗಳ ಭೋಜನ ಬೇಜಾರಾಯಿತೋ ಅಥವಾ
ಇನ್ನೇಲ್ಲಾದರೂ ಭೂರಿಭೋಜನದ ಸುಳಿವು ಸಿಕ್ಕಿತೋ ಅಂತೂ ನಮ್ಮ ಮನೆಯ ಮೇಲಿಂದ ಮರೆಯಾದವು.ಬಳಿಕ ಕಾಗೆ,ಮೈನಾ,ಮಿಂಚುಳ್ಳಿಗಳು ಮಳೆಹುಳುಗಳ ಶಿಖಾರಿಯಲ್ಲಿ ಮಗ್ನರಾದವು.ನಿಸರ್ಗದ ಆಹಾರ ಚಕ್ರದಲ್ಲಿ ಕೊಂಚ ತಡವಾದರೂ ಸಣ್ಣ ಹಕ್ಕಿಗಳಿಗೆ ಅವುಗಳ ಪಾಲು ಸಿಕ್ಕಿತ್ತು.
*** ಅಶೋಕ ಉಚ್ಚಂಗಿ ***

10 comments:

ಚಂದ್ರಕಾಂತ ಎಸ್ said...

ನಮಸ್ಕಾರ. ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ. ( ಹಾಗಂದುಕೊಂಡಿರುವೆ) ಇತರ ಬ್ಲಾಗ್ ಗಳಲ್ಲಿ ನಿಮ್ಮ ಬರವಣಿಗೆ ನೋಡಿ ಇಲ್ಲಿಗೆ ಬಂದೆ. ಇದೊಂದೇ ಬರವಣಿಗೆ ಓದಿರುವುದು. ನಿಮ್ಮ ಫೋಟೋಗ್ರಫಿ ಮತ್ತು ಬರವಣಿಗೆ ಒಂದನ್ನೊಂದು ಮೀರಿಸುತ್ತವೆ.

ಹದ್ದುಗಳು ಹುಳಗಳನ್ನು ಹಿಡಿದ ಪ್ರಸಂಗ ಓದುತ್ತಿದ್ದಾಗ ತೇಜಸ್ವಿಯವರ ಏರೋಪ್ಲೇನ್ ಚಿಟ್ಟೆ ಹುಳಗಳನ್ನು ಹಿಡಿಯುತ್ತಿದ್ದ ಪ್ರಸಂಗ ನೆನಪಿಗೆ ಬಂದಿತು.

ಉತ್ತಮ ಬರವಣಿಗೆಗೆ ಧನ್ಯವಾದಗಳು.

ಸುಶ್ರುತ ದೊಡ್ಡೇರಿ said...

ರಿಚರ್ಡ್ ಬಾಶ್‍ನ ಜೊನಾಥನ್ ಲಿವಿಂಗ್‍ಸ್ಟನ್ ಸೀಗಲ್ ಪುಸ್ತಕದಲ್ಲಿ ನೋಡಿದ್ದ ಚಿತ್ರಗಳು ನೆನಪಾದವು..

ಒಳ್ಳೇ ಚಿತ್ರಗಳು. :-)

Ashok Uchangi said...

*‌‍_* ಚಂದ್ರಕಾಂತ ಮೇಡಂ
ನಮಸ್ಕಾರ. ಸುಸ್ವಾಗತ. ನಿಮ್ಮ ಬ್ಲಾಗಿಗೆ ಅನೇಕ ಸಲ ಬ್ಂದಿದ್ದೆ,ಆದರೆ ಪ್ರತಿಕ್ರಿಯಿಸಲು ಆಗಿರಲಿಲ್ಲ.ಪುಟ್ಟಿಯ ತರ್ಕ,ಕುಂಚದ ಕಲೆ,ಫೋಟೊಗ್ರಫಿ ಎಲ್ಲವೂ ಚೆನ್ನಾಗಿದೆ,ಹಾಗೆಯೇ ನೀವು ಸುಧಾದಲ್ಲಿ ಲೂನಾ ಕಲಿತಿದ್ದೂ ಸಹ.
ಧನ್ಯವಾದ
ವಿಶ್ವಾಸವಿರಲಿ.
*_* ಸುಶ್ರುತ ನಿಮ್ಮ ಬ್ಲಾಗ್ ಚೆನ್ನಾಗಿದೆ,ಅನೇಕ ಸಲ ಬಂದಿದ್ದೆ,ಪ್ರತಿಕ್ರಿಯಿಸಲು ಆಗಿರಲಿಲ್ಲ.ಬಿಡುವುಮಾಡೀಕೊಂಡು ಬರುತ್ತಿರಿ
ಧನ್ಯವಾದ
ವಿಶ್ವಾಸವಿರಲಿ.

ಭಾರ್ಗವಿ said...

ಬರೀ ಫೋಟೋಗ್ರಫಿ,ಕಥೆಹೇಳುವ ಕಲೆಯಲ್ಲದೇ ಬರೆಯುವ ಕಲೆ ಕೂಡಾ ಸಿದ್ಧಿಸಿದೆ ನಿಮಗೆ.ಫೋಟೋ & ಲೇಖನ ಎರಡು ಚೆನ್ನಾಗಿವೆ.

shivu said...

ಆಶೋಕ್,

ಎರಡು ದಿನದಿಂದ ನಾನು ಯಾರ ಬ್ಲಾಗಿಗೂ ಹೋಗಿರಲಿಲ್ಲ...ನನ್ನ ಹೊಸ ಲೇಖನದ ಹ್ಯಾಂಗೋವರಿನಿಂದ ಹೊರಬಂದಿರಲಿಲ್ಲ....

ನಾನು ಈ ಲೇಖನ ನೋಡಿದಾಗ ಮೊದಲು ಎಂದಿನಂತೆ ಪಕ್ಷಿಗಳ ಬಗ್ಗೆ ಮಾಹಿತಿ ಎಂದುಕೊಂಡೆ. ಅದರೆ ಇಲ್ಲಿ ನೋಡಿದರೆ ಹೊಸ ವಿಚಾರವಿದೆ....ಹದ್ದುಗಳು ಹುತ್ತದಿಂದ ಹೊರಬರುವ ಮಳೆಹುಳುಗಳನ್ನು ಹಿಡಿಯುವ ವಿಚಾರ ನನಗೆ ಹೊಸತು. ಮತ್ತು ಕುತೂಹಲಕಾರಿಯಾದ್ದದ್ದು....ನಿಮ್ಮ ಸಮಯೋಜಿತ ಫೋಟೋಗ್ರಪಿ ತುಂಬಾ ಚೆನ್ನಾಗಿದೆ...ಮತು ಅದಕ್ಕೆ ತಕ್ಕಂತೆ ಮಾಹಿತಿಯುಳ್ಳ ಬರಹ.....ನಿಮ್ಮ ಬ್ಲಾಗ್ ಮೊದಲಿಗಿಂತ ಚೆನ್ನಾಗಿ ಬರುತ್ತಿದೆ ಎನಿಸಿತು ನನಗೆ....ಗುಡ್ ಮುಂದುವರಿಸಿ..........

H.S. Dharmendra said...

ಪ್ರಿಯ ಅಶೋಕ್ ಅವರೇ, ನನ್ನ ಬ್ಲಾಗ್ ಅನ್ನು ಸಂದರ್ಶಿಸಿ ನನ್ನ ಪೆದ್ದುಗುಂಡನ ರಗಳೆಯನ್ನು ಮೆಚ್ಚಿದ್ದೀರಿ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ನಿಮ್ಮ ಬ್ಲಾಗ್ ಕೂಡ ನಿಮ್ಮ ಬರವಣಿಗೆಯಷ್ಟೇ ಸೊಗಸಾಗಿದೆ. ನಿಮ್ಮ ಓದುವ ಗೀಳು, ಪುಟ್ಟ ಅಂಶವನ್ನೂ ಗಮನಿಸುವ ಪರಿ, ಓದಿದ್ದನ್ನು ನೋಡಿದ್ದನ್ನು ತಾಳೆ ಹಾಕಿ ಹೊಸ ಲೇಖನವನ್ನು ಬರೆಯುವ ಜಾಣ್ಮೆ, ಅದಕ್ಕೆ ತಕ್ಕಂತಹ ಛಾಯಾಚಿತ್ರ ಹಿಡಿಯುವ ಕೌಶಲ - ಎಲ್ಲವೂ ಸೊಗಸು.

http://onderadumaatu.blogspot.com

ಚಂದ್ರಕಾಂತ ಎಸ್ said...

ನಮಸ್ಕಾರ. ನನ್ನ ಬ್ಲಾಗ್ ಬಗ್ಗೆ ಒಳ್ಳೆಯ ಮಾತನಾಡಿದ್ದಕ್ಕೆ ಧನ್ಯವಾದಗಳು. ಮೊನ್ನೆ ತಾನೆ ಸುಧಾದಲ್ಲಿ ಬಂದ ಲೂನಾ ಕಲಿತ ಬಗ್ಗೆ ನಿಮ್ಮ ಅಭಿಪ್ರಾಯಕ್ಕೂ ಧನ್ಯವಾದಗಳು

ಸಾಧ್ಯವಾದರೆ ನನ್ನ ಇತ್ತೀಚಿನ ಬರವಣಿಗೆ ‘ ಚಂದ್ರಮತಿಯ ಅಂತರಂಗ ’ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ಜೋಮನ್ said...

ಉಚ್ಚಂಗಿಯವರಿಗೆ ನಮಸ್ಕಾರ.

ಇಲ್ಲಿ ಬೆಂಗಳೂರಿನಲ್ಲಿ ಕುಳಿತು ನಿಮ್ಮ ಮೈಸೂರು ಮಲ್ಲಿಗೆಯ ಘಮ ಅಗ್ರಾಣಿಸುತ್ತಿರುವೆ. ಹಿತವಾಗಿದೆ. ಸುಂದರ ಚಿತ್ರಗಳು, ಅದಕ್ಕೊಪ್ಪುವ ಬರಹಗಳು ಮತ್ತೆ ಮತ್ತೆ ಓದುವಂತಿದೆ.

ಹುಲಿಯೂರಿನ ಹದ್ದುಗಳ ಲೇಖನದ ಜೊತೆಗೇ ತೇಜಸ್ವಿಯನ್ನೂ ನೆನಪಿಸಿದ್ದೀರಿ. ತೇಜಸ್ವಿ ಈ ಜೀವಜಾಲದ ವಿಸ್ಮಯ ಬೆಳೆಗಾರ ಕೂಡ ಆಗಿದ್ದರು.

ಸಿಮೆಂಟು ಮರಳಿನ ಮಧ್ಯೆ said...

ಅಶೋಕ್....

ಬಹಳ ತಡವಾಗಿ ಬಂದೆ ಕ್ಷಮೆ ಇರಲಿ...

ನನ್ನ ನೆಚ್ಚಿನ ಲೇಖಕ "ತೇಜಸ್ವಿಯವರ " ಜ್ನಾಪಕ ಮಾಡಿಸಿದ್ದೀರಿ...

ಚಂದವಾದ, ಚೊಕ್ಕವಾದ ಲೇಖನ..

ತುಂಬ ಇಷ್ಟವಾಯಿತು...

ಅಭಿನಂದನೆಗಳು....

Ashok Uchangi said...

ಪ್ರತಿಕ್ರಿಯಿಸಿದ ಎಲ್ಲಾ ಆತ್ಮೀಯ ಬ್ಲಾಗಿಗರಿಗೆ ಹಾಗೂ ಸ್ನೇಹಿತರಿಗೆ ಧನ್ಯವಾದಗಳು
ಅಶೋಕ ಉಚ್ಚಂಗಿ