Tuesday, January 13, 2009

ಸಂಕ್ರಾಂತಿಯ ಸಡಗರ


ಆತ್ಮೀಯ
ಬ್ಲಾಗಿಗರಿಗೆ....



ಮಕರ


ಸಂಕ್ರಾಂತಿ


ಹಬ್ಬದ


ಹಾರ್ದಿಕ

ಶುಭಾಶಯಗಳು.....!

- ಅಶೋಕ ಉಚ್ಚಂಗಿ.

Wednesday, January 7, 2009

ಮೊದಲನೆ ಮೈಸೂರು ಪಾಕ್.....!



ಪ್ರಿಯರೆ....
ಇದೋ ಇಲ್ಲಿದೆ ಮೈಸೂರು ಪಾಕ್!ಮೈಸೂರಿನ ಸ್ವಾರಸ್ಯಕರ ಸಂಗತಿಗಳು ಆಗಾಗ ನಿಮ್ಮ ಮನತಣಿಸಲು ಇಲ್ಲಿ ಕಾಣಿಸಿಕೊಳ್ಳುತ್ತವೆ.ಮೈಸೂರು ಪಾಕ್ ಎಂದರೆ ಸಿಹಿಯಷ್ಟೇ ಅಲ್ಲ,ಚಿಂತನಾರ್ಹ ಸಂಗತಿಗಳು ಇಲ್ಲಿ ಬೆಳಕು ಕಾಣುತ್ತವೆ.ಸೆಪ್ಪೆಯಂತೂ ಖಂಡಿತಾ ಆಗಿರಲಾರದು.ಮೈಸೂರು ಪಾಕಿಗೆ ನಿಮ್ಮ ಕೈ ಜೋಡಿಸಬಹುದು.ಮೈಸೂರಿಗೆ ಸಂಬಂಧಿಸಿದ ಸ್ವಾರಸ್ಯಗಳಿದ್ದರೆ ದಯವಿಟ್ಟು ತಿಳಿಸಿ.ಇಲ್ಲಿ ಪ್ರಕಟಿಸೋಣ.



ನಮ್ಮೂರಲ್ಲಿ ಮಹಾತ್ಮರ,ಪ್ರಸಿದ್ದರ ಹೆಸರಿನಲ್ಲಿ ರಸ್ತೆಯಿದೆ,ವೃತ್ತವಿದೆ ಎಂದು ನೀವು ಜಂಭಕೊಚ್ಚಬೇಡಿ.ನಮ್ಮೂರು ಮೈಸೂರಿನಲ್ಲಿ ಕೆಡಿ ಹೆಸರಲ್ಲೂ ರಸ್ತೆಯಿದೆ,ವೃತ್ತವಿದೆ...ಗೊತ್ತಾ...?
ಅರೆರೆ ಇದೇನು ಕೆಡಿ ಹೆಸರಲ್ಲೂ ರಸ್ತೆ,ವೃತ್ತವಿದೆಯಲ್ಲಾ ಮೈಸೂರಿನ ಸಂಸ್ಕೃತಿ ಇಷ್ಟೇನಾ ಎಂದು ಮೂಗು ಮುರಿಯಬೇಡಿ...... ಕೃಷ್ಣದೇವರಾಯ,ಕಾಳಿದಾಸರನ್ನುಪಂಕಾಗಿಏನೆನ್ನಬಹುದು ಹೇಳಿ? ಕೆ.ಡಿ!(Krishna Devaraya )..... ಮೈಸೂರಿನ ಪಡ್ಡೆ ಹೈಕಳ ಬಾಯಲ್ಲಿ ಕೃಷ್ಣದೇವರಾಯ ವೃತ್ತ ಕೆಡಿ ಸರ್ಕಲ್ ಆಗಿದೆ!ಕಾಳಿದಾಸ ರಸ್ತೆ ಕೆಡಿ ರೋಡ್ ಆಗಿದೆ. ಅಯ್ಯೋ ರಾ....!
~~~ಅಶೋಕ Uchangi***
ಚಿತ್ರಕೃಪೆ-ಇಂಡಿಯಾಫುಡ್‌ಫಾರೆವರ್

Tuesday, December 30, 2008

-*-*-* ನಾವು ಭಾರತೀಯರು (*(*

ನಾವು ಭಾರತೀಯರು ಅದರಲ್ಲೂ ಹಿಂದೂಗಳು ಹಬ್ಬಗಳ ವಿಷಯದಲ್ಲಿ ತುಂಬಾ ಧಾರಾಳಿಗಳು.ಆರ್ಥಿಕ ಮುಗ್ಗಟ್ಟಿರಲಿ,ವಿಪ್ಲವದ ವರ್ಷವಾಗಿರಲಿ ಹೊಸ ವರ್ಷವನ್ನು ಸಡಗರ,ಸಂಭ್ರಮದಿಂದ ಆಚರಿಸಲು ಸಜ್ಜಾಗುತ್ತಿದ್ದೇವೆ.
ನಾವು ಹಿಂದೂಗಳು ಅನೇಕ ಹಬ್ಬಹರಿದಿನಗಳನ್ನು ಆಚರಿಸುತ್ತೇವೆ.ಜೊತೆಗೆ ಇತರರ ಹಬ್ಬವನ್ನೂ!
ಯುಗಾದಿಯನ್ನು ಎಷ್ಟರ ಮಟ್ಟಿಗೆ ಆಚರಿಸುತ್ತೇವೋ,ಬಿಡ್ತೀವೋ ಜನವರಿ ಒಂದರ ಹೊಸವರ್ಷದ ಸ್ವಾಗತವನ್ನು ಈ "ಮದ್ಯ" ರಾತ್ರಿಯನ್ನು ಬಹಳ ‘ಶ್ರದ್ದೆಯಿಂದಆಚರಿಸಲು ಸಜ್ಜಾಗಿದ್ದೇವೆ ಅಲ್ಲವೆ? ಅದೇನೇ ಇರಲಿ
ಇಂದು ಪ್ರಾರ್ಥಿಸಲು ಕಾರಣವಿದೆ...
ನಮ್ಮೆಲ್ಲಾ ಸಂಕಷ್ಟಗಳು ದೂರಾಗಲೆಂದು ಇಂದೂ ಪ್ರಾರ್ಥಿಸೋಣ...ಯುಗಾದಿಯಂದೂ ಸಹ!
ನಿಮಗೆಲ್ಲರಿಗೂ ಹೊಸವರ್ಷ ಹೊಸತನ,ಸಂತಸ,ಸಂಭ್ರಮ ತರಲೆಂದು ನನ್ನ ಹಾರೈಕೆ.
ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಕಾಮನೆಗಳು!

****ಅಶೋಕ ಉಚ್ಚಂಗಿ*****

Monday, December 29, 2008

*** ರಂಗುರಂಗಿನ ರಂಗಾಯಣ ~~~

-*ನಾರಂಸಂಕಟ.....-*

ಮೈಸೂರಿನ ರಂಗಾಯಣದಲ್ಲಿ ಡಿಸೆಂಬರ್ ೨೫ ರಿಂದ ೨೯ರವರಗೆ ನಡೆದ ಬಹುರೂಪಿಯೆಂಬ ನಾಟಕೋತ್ಸವಕ್ಕೆ ನಾನಾರೂಪಗಳಿವೆ.ರಂಗಪ್ರಯೋಗಗಳಲ್ಲದೆ ಸಿನಿಮಾ,ಜಾನಪದ ಉತ್ಸವ,ಬಯಲು ನಾಟಕಗಳು,ವಿಚಾರಸಂಕಿರಣಗಳು,ಛ್ ಹೀಗೆ
ವಿವಿಧ ಬಣ್ಣಗಳ ಬಹುರೂಪಿ ಒಂದರ್ಥದಲ್ಲಿ ಜಾತ್ರೆಯೇ ಸರಿ.
ಸಿನಿಮಾರಂಗದಿಂದಾಗಿ ರಂಗಭೂಮಿ ಬಡಕಲಾಯಿತು,ವೃತ್ತಿಪರ ನಾಟಕ ಕಂಪನಿಗಳು ನೆಲಕಚ್ಚಿದವು, ಕಲಾವಿದರು ಅನಾಥರಾದರು ಎಂಬೆಲ್ಲಾ ಕೂಗು ಕೇಳಿರುವ ನೀವು ಶಭಾಷ್! ಮೈಸೂರಿನಲ್ಲಾದರೂ ರಂಗಕಲೆ ಉಸಿರಾಡುತ್ತಿದೆಯಲ್ಲಾ,ಪರವಾಗಿಲ್ಲಾ ಮೈಸೂರಿನ ಜನ ಎಂದು ನಮ್ಮ ಬೆನ್ನು ತಟ್ಟುತ್ತಿದ್ದೀರಲ್ಲವೇ?
ರಂಗಾಯಣದಭೂಮಿಗೀತದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಿಗೆ ಪ್ರವೇಶ ದರ ರೂ ೪೦ ನಿಗದಿಯಾಗಿತ್ತು.ಆದರೆ ಜನರೇ ಬರುತ್ತಿರಲಿಲ್ಲ. ದರವನ್ನು ೨೫ ರೂಗಳಿಗೆ ಇಳಿಸಿ,ಆಗಲಾದರೂ ಜನ ಬರುತ್ತಾರೋ ನೋಡೋಣ ಎಂದು ಅಳಲು ತೋಡಿಕೊಂಡ ಹವ್ಯಾಸಿ ರಂಗಕಲಾವಿದರು ಧರಣಿ ಕೂತರು.ಒಂದಷ್ಟುಬೀದಿನಾಟಕಗಳುನಡೆದ ಮೇಲೆ ಭಾನುವಾರದಿಂದ ಉಚಿತ ಪ್ರವೇಶ ಎಂದು ಘೋಷಿಸಲಾಯಿತು!
ಇದು ನೋಡಿ ಇಂದಿನ ರಂಗಭೂಮಿಯ ಸ್ಥಿತಿ !
ಸರಿ ಉಚಿತ ಪ್ರವೇಶ ಎಂದಾದ ಮೇಲೆ ಜನಸಾಮಾನ್ಯರು ಬಂದರೆ? ಉಹೂಂ...ಇಲ್ಲ.ಆದರೆ ರಂಗಮಂದಿರ ಭರ್ತಿಯಾಗುತ್ತಿತ್ತು.ಹೇಗೆ?
ಉಚಿತ ಪ್ರವೇಶವೆಂದ ಮೇಲೆ ಇಷ್ಟವಿರಲಿ ಬಿಡಲಿ ಒಂದಷ್ಟು
ರಂಗಾಸಕ್ತರು,ಕಲಾವಿದರು,ವಿಚಾರವಾದಿಗಳು,
ಕಲಾವಿದ್ಯಾರ್ಥಿಗಳು ಒಳಹೊಕ್ಕರು. ರಂಗಮಂದಿರ ತುಂಬಿತು..
ಇದು ರಂಗಾಯಣದ ಅಂಗಳದಲ್ಲಿನ ಗುಸುಗುಸು ಮಾತು.
ನಾವು ಜನಸಾಮಾನ್ಯರು ಇತರ ಮಾಧ್ಯಮಗಳ ಪ್ರಭಾವದಿಂದಲೋ,ನಾಟಕಗಳ ಬಗೆಗಿನ ಅನಾಸಕ್ತಿಯಿಂದಲೋ ಅಥವಾ ನಾಟಕಗಳಿಗೆ ಪ್ರಚಾರದ ಕೊರತೆಯಿಂದಲೋ ಉಚಿತವೆಂದರೂ ನೋಡಲು ಹೋಗೂಲ್ವಲ್ಲಾ....ಛೇ...ಎಂಥಾ...ದುರಂತ!
ಮೈಸೂರಿನಿಂದ ಪ್ರಕಟಗೊಳ್ಳುವ ಪಾಕ್ಷಿಕವೊಂದು ವಾರಕ್ಕೊಂದು ನಾಟಕದ ವಿಮರ್ಶೆ ಬರೆಯಿರಿ ಎಂದು ನನಗೆ ಆಹ್ವಾನ ನೀಡಿತು.ಅದಕ್ಕೆ ನಾನು ನಾಟಕಗಳನ್ನು ವಿಮರ್ಶಿಸುವಷ್ಟು ತಜ್ಞ ನಾನಲ್ಲ,ಬೇರೆ ಯಾರಿಗಾದರೂ ಹೇಳಿ ಎಂದು ತಿಳಿಸಿದೆ.ಅದಕ್ಕೆ ಸಂಪಾದಕರಿಂದ ಬಂದ ಉತ್ತರವೇನು ಗೊತ್ತೇ?ಮೊದಲಿಂದ ಕೊನೆವರೆಗೂ ನಾಟಕ ನೋಡಿ(- ಗಂಟೆ ಕೂತು) ವಿಮರ್ಶಿಸುವ ತಾಳ್ಮೆ ಇರುವವರು ಯಾರು ಇಲ್ಲಾ,ನಾವು ಅನೇಕರಲ್ಲಿ ವಿಚಾರಿಸಿದೆವು ಎಂದರು.ಹೀಗಿದೆ ನೋಡಿ ಇಂದಿನ ರಂಗನಾಟಕಗಳ ಸ್ಥಿತಿ.
ರಂಗಾಯಣವೆಂಬ ದೇಸಿ ಮಾರುಕಟ್ಟೆ!
ಬಹುರೂಪಿ ನಡೆವ ದಿನಗಳಲ್ಲಿ ಸಂಜೆಯಾಯಿತೆಂದರೆ ರಂಗಯಣದ ಅಂಗಳ ರಂಗೇರುತ್ತದೆ.ಕಾರಣ
ಇಲ್ಲಿನ ಆವರಣದಲ್ಲಿನ ಮಳಿಗೆಗಳನ್ನು ಸಂದರ್ಶಿಸಲು ಮೈಸೂರಿನ ಮೂಲೆಮೂಲೆಯಿಂದ ಜನ ಬರುತ್ತಾರೆ.
ರಂಗಾಯಣದ ಬಹುರೂಪಿ ಆರಂಭಕ್ಕೆ ಒಂದು ತಿಂಗಳು ಮುಂಚೆಯೇ ನನ್ನ ಮಡದಿ ಹೇಳುತ್ತಿದ್ದಳು.."ಕಳೆದ ಬಾರಿ ಬಹುರೂಪಿ ಜಾತ್ರೆಯಲ್ಲಿ ತಂದ ಬೆಡ್ಸ್ಪ್ರೆಡ್ ಚೆನ್ನಾಗಿದೆ ಸಲ
ಇನ್ನೊಂದು ತರಬೇಕು..". ನನ್ನ ಗೆಳೆಯ ಕೇಳಿದ "ಜೋಳದರೊಟ್ಟಿ ಇದೆಯೇನಪ್ಪಾ ಯಾವಾಗ ಹೋಗೋಣ?". ನಮ್ಮೂರಿನ(ಉತ್ತರ ಕನ್ನಡ ಜಿಲ್ಲೆ) ತೊಡೆದೇವು ಸಿಗುತ್ತಂತೆ.ನಾಳೆ ಹೋಗ್ತಿದ್ದೀವಿಎಂದರು ಪಕ್ಕದ ಮನೆಯ ಹೆಗಡೆ ಕುಟುಂಬ.
ಬಹುರೂಪಿಯಲ್ಲಿ ಯಾವ ನಾಟಕವಿದೆ ಎಂದು ಯಾರೂ ಕೇಳಲಿಲ್ಲ!!!
ಇಲ್ಲಿನ ಮಳಿಗೆಗಳು ದೇಸಿ ವಸ್ತುಗಳ ಜೊತೆಗೆ ಪುಸ್ತಕ,ದೇಸಿ ತಿಂಡಿತಿನಿಸುಗಳ ರುಚಿಯನ್ನು ನೋಡುಗರಿಗೆ ಪರಿಚಯಿಸಿವೆ. ಕಾರಣಕ್ಕೆ ಇಲ್ಲಿಗೆ ಜನ ಮುಗಿಬೀಳುತ್ತಾರೆ.
ನಿಜವಾದ ಅರ್ಥದಲ್ಲಿ ಬಹುರೂಪಿಯ ಸಾರ್ಥಕತೆ ನಮ್ಮ ಪರಂಪರೆಯನ್ನು ಪರಿಚಯಿದ್ದರಲ್ಲೇ!.
ಸಮಾರೋಪ
ನಿನ್ನೆ ಅಂದರೆ ಸೋಮವಾರ ಐದು ದಿನಗಳ ಬಹುರೂಪಿಗೆ ತೆರೆಬಿತ್ತು.ಅಭಿನಯ ಶಾರದೆ ಜಯಂತಿ ಬಂದಿದ್ದರು.ನಾಗಾಭರಣ ಇದ್ದರು.ಸಂಜೆ ಬಯಲು ರಂಗಮಂದಿರದಲ್ಲಿ ರಂಗಗೀತೆಯನ್ನು ಹಾಡುವುದರೊಂದಿಗೆ ಸಮಾರೋಪ ಕಾರ್ಯಕ್ರಮ ಆರಂಭವಾಯಿತು.ಬಯಲುರಂಗ ತುಂಬಿತ್ತು.ಜಯಂತಿ ಮೇಡಂರಿಂದಾಗಿ!
*ಸಮಾರೋಪ ಮುಗಿಸಿ ಅತ್ತ ಹೋದರು ಅಭಿನಯ ಶಾರದೆ ಜನರೂ ಖಾಲಿ ಮುಂದಿನ ನಾಟಕಕ್ಕೆ ಕಾಯದೆ!*
ಅರ್ಥವಾಯ್ತಲ್ಲಾ ಸಿನಿಮಾಕ್ಕೂ ನಾಟಕಕ್ಕೂ ಇರುವ ವ್ಯತ್ಯಾಸ.....
ನಾಟಕರಂಗದ ಸಂಕಟವನ್ನಷ್ಟೇ ಹೇಳುತ್ತಿದ್ದೀರಲ್ಲಾ ಪರಿಹಾರವೇನು ಇದಕ್ಕೆ ಎಂದು ನೀವು ಕೇಳಬಹುದು.ನಾನೂ ಬಗ್ಗೆ ತಲೆಕೆಡೆಸಿಕೊಂಡು ಸಿಕ್ಕಸಿಕ್ಕ ಬುದ್ದಿಜೀವಿಗಳನ್ನೆಲ್ಲಾ ಕೇಳಿದೆ.ಯಾರಿಂದಲೂ ಸಮರ್ಪಕ ಉತ್ತರವಿಲ್ಲ.
ಬಹುಷಃ ನಾಟಕರಂಗವು ಜನಸಾಮಾನ್ಯರಿಂದ ಬಹುದೂರ ಹೋಗಿಬಿಟ್ಟಿದೆಯೇನೋ? ಹಿಂತಿರುಗಿ ಬರಲಾರದಷ್ಟು...!!!
ಇದು ರಂಗಾಯಣದ ತಪ್ಪಲ್ಲ...ಯಾರನ್ನೂ ದೂರುವಂತಿಲ್ಲ.ಜನರನ್ನು ನಾಟಕದತ್ತ ಸೆಳೆಯಲು ಪ್ರಯತ್ನಿಸಬೇಕು.ರಂಗಾಯಣದಂತಹ ರೆಪೆರ್ಟರಿಗಳು ಕಸರತ್ತು ಮಾಡುತ್ತಿವೆ.ಅದಕ್ಕಾಗಿ ಎಲ್ಲಾ ನಾಟಕಗಳು”.
ಇವರೂ ಗೊಂದಲದಲ್ಲಿದ್ದಾರೆ...ಹೇಗೆ? ಫಲಕ ನೋಡಿ!!!!
ನಿಮ್ಮ ಜವಾಬ್ದಾರಿಯೇನು ಗೊತ್ತಾಯ್ತಲ್ಲ.ನಿಮ್ಮ ಕಾಮೆಂಟು,ಸಲಹೆಗಳು ರಂಗಾಯಣಕ್ಕೆ ತಲುಪುತ್ತವೆ.
-ಅಶೋಕ ಊಚ್ಚಂಗಿ.

Thursday, December 25, 2008

ಕ್ರಿಸ್‌ಮಸ್ ಚಕ್ಕುಲಿ,ಗರಿಗರಿ ವ್ಹೀಲ್!


ಆಹಾ....! ಕ್ರಿಸ್‌ಮಸ್ ತಿನಿಸು...ಬಲು ಸೊಗಸು

ಕ್ರಿಶ್ಚಿಯನ್ನರು ಹಬ್ಬಗಳನ್ನು ಅದರಲ್ಲೂ ಮುಖ್ಯವಾಗಿ ಕ್ರಿಸ್‌ಮಸ್ ಅನ್ನು ಕೇಕ್,ವೈನ್,ನಾನ್‌ವೆಜ್ ತಯಾರಿಸಿ ಚರ್ಚ್‌ಗೆ ಹೋಗಿ ಪ್ರೇಯರ್ ಮಾಡಿ ಮನೆಯಲ್ಲೋ ಇಲ್ಲ ಪಾರ್ಟಿಯಲ್ಲೋ ಕುಡಿದು ಕುಪ್ಪಳಿಸುತ್ತಾರೆ ಎಂಬುದು ನನ್ನ ತಿಳುವಳಿಕೆಯಾಗಿತ್ತು.
ನನ್ನ ಪತ್ನಿಯ ಗೆಳತಿಯೊಬ್ಬರು ನಮ್ಮ ಮನೆ ಹತ್ತಿರವೇ ಇದ್ದಾರೆ.ಅವರ ಹೆಸರು ಉಷಾ ಪಿಂಟೋ.ಬ್ಯೂಟಿ ಪಾರ್ಲರ್ ನಡೆಸುತ್ತಾರೆ ಕೊಂಕಣಿ ಕ್ರಿಶ್ಚಿಯನ್ನರು.(ಬ್ಯೂಟಿ ಪಾರ್ಲರ್‌ನವರು ಹೆಂಗಸರಿಗೆ ಆತ್ಮೀಯರಾಗೋದರಲ್ಲಿ ವಿಶೇಷವೇನಿಲ್ಲ ಎನ್ನುತ್ತೀರಾ?,,, ನಿಮ್ಮ ಮಾತು ನಿಜ ಅನ್ನಿ!) :)ಆದರೆ ಇವರು ನನ್ನ ಪತ್ನಿಗೆ ತುಂಬಾ ಆತ್ಮೀಯರು.ನಮ್ಮ ಕುಟುಂಬಕ್ಕೂ.
ನಾನು ಈಗ ಹೇಳಹೊರಟಿದ್ದು ಕ್ರಿಸ್ಮಸ್ ಆಚರಣೆಯ ಬಗ್ಗೆ ನನಗಿದ್ದ ಅಭಿಪ್ರಾಯ ಬದಲಾಯಿಸಿಕೊಳ್ಳಬೇಕಾದ ಬಗ್ಗೆ.ಇವರು ಈಗ ತಾನೆ ನಮ್ಮ ಮನೆಗೆ ಬಂದಿದ್ದರು.ಬೆಳಿಗ್ಗೆಯಿಂದ ಹಬ್ಬದ ಆಚರಣೆಯಲ್ಲಿ ಬಿಜಿಯಾಗಿದ್ದರೆನಿಸುತ್ತೆ.ಬಳಲಿದ್ದರು. ಏದುಸಿರು ಬಿಡುತ್ತಾ ಒಂದೈದು ನಿಮಿಷ ಮಾತನಾಡಿ ಹಬ್ಬದ ತಿಂಡಿಗಳನ್ನು ಕೊಟ್ಟು ಹೋದರು.ಕೇಕ್,ಚಕ್ಕುಲಿ,ರವೆ ಉಂಡೆ,ಸಿಹಿ ಉಂಡೆ,ಇನ್ನೆಂತದೋ ಒಂದು ಸಿಹಿಯಾದ ಗರಿಗರಿಯಾದ ವೀಲ್! ಇನ್ನು ಎಂತೆಂತದೋ ಸಿಹಿತಿಂಡಿಗಳು.ಜೊತೆಗೆ ಮನೆಯಲ್ಲೇ ಅವರು ತಯಾರಿಸಿದ ತಾಜಾ ವೈನ್ ನೀಡಿ ಶುಭ ಹಾರೈಸಿ ಗಡಿಬಿಡಿಯಲ್ಲಿ ಹೊರಟರು.ನಾಳೆ ಮಂಗಳೂರಿಗೆ ಹೋಗಬೇಕಂತೆ.

ಈ ತಿಂಡಿಗಳ ಹೆಸರು ಕೇಳಲು ಮನಸ್ಸಿದ್ದರೂ ಅವರ ತರಾತುರಿ ನೋಡಿ ಸುಮ್ಮನಾದೆ.ಬೆಳಿಗ್ಗೆ
ಮನೆಯಲ್ಲಿ ಪೂಜೆ ಮಾಡಿ ಇಡ್ಲಿ ಮಾಡಿದ್ದರಂತೆ.(ಇದನ್ನು ಮಾಡಲೇಬೇಕಂತೆ).ಇವರು ಕ್ರಿಸ್‌ಮಸ್ ಅನ್ನು ಹೀಗೆ ನಮ್ಮ ಸಂಪ್ರದಾಯಕ್ಕೆ ಹತ್ತಿರವಾಗಿ ಆಚರಿಸುತ್ತಾರೆ ಎಂಬುದು ನನಗರಿವಾದಾಗ ಈ ಬಗ್ಗೆ ಕುತೂಹಲ ಮೂಡಿತು.ಈ ಬಗ್ಗೆ ಕೇಳಿ ತಿಳಿದುಕೋಳ್ಳಬೇಕೆನಿಸಿತು.ಅವರ ಆತುರ ನೋಡಿ ಸುಮ್ಮನಾದೆ.ಅವರು ತಿರುಗಿ ಬಂದ ನಂತರ ಈ ಬಗ್ಗೆ ಕೇಳಿ ತಿಳಿದು ಕೊಂಡು ಬರೆಯುತ್ತೇನೆ.
ಈ ತಿಂಡಿಗಳನ್ನು ನೋಡಿದಾಗ ನನಗಂತೂ ಕೃಷ್ಣ ಜನ್ಮಾಷ್ಟಮಿ ನೆನಪಾಯಿತು.ನಾನು ಲಕ್ಷ್ಮಿ ಟಾಕಿಸ್ ಹಿಂಭಾಗ (ಮೈಸೂರು) ರೂಮಿನಲ್ಲಿದ್ದಾಗ ಅಲ್ಲಿನ ಅಯ್ಯಂಗಾರ್ ಅಂಕಲ್ ಮನೆಯಲ್ಲಿ ಮಾಡುತ್ತಿದ್ದ ಕೃಷ್ಣ ಜನ್ಮಾಷ್ಟಮಿಯ
ಕುರುಕಲು ತಿಂಡಿಗಳು ನೆನಪಾದವು. ಆಹಾ ಏನು ರುಚಿ....ಈಗಲೂ ಬಾಯಲ್ಲಿ ನೀರೂರುತ್ತೆ.(ಕೃಷ್ಣ ಜನ್ಮಾಷ್ಟಮಿ ಹತ್ತಿರ ಬಂದಂತೆ ಅಯ್ಯಂಗಾರರನ್ನು ವಿಶೇಷ ಪ್ರೀತಿಯಿಂದ ಮಾತನಾಡಿಸುತ್ತಿದ್ದೆ......ನನ್ನನ್ನು ಮರೆತು ಬಿಡಬಾರದೆಂದು..)
ಎಲ್ಲಿಯ ಕ್ರಿಸ್ಮಸ್ ಎಲ್ಲಿಯ ಕೃಷ್ಣ ಜನ್ಮಾಷ್ಟಮಿ.ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ? ಧರ್ಮ ಬೇರಾದರೂ ಆಚರಣೆಯಲ್ಲಿ ಅದೆಷ್ಟು ಸಾಮ್ಯತೆ?... ರ್ಮ ಹಲವು ಭಾವ ಒಂದು...! ಇದೇ ಅಲ್ಲವೇ ಇಂದಿನ ಭಾರತಕ್ಕೆ ಬೇಕಿರುವುದು....
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು!!!
--ಅಶೋಕ ಉಚ್ಚಂಗಿ.
ಸಾಂತಾಕ್ಲಾಸ್ ಚಿತ್ರ-ಗೂಗಲ್ ಕೃಪೆ.

Tuesday, December 23, 2008

ಸಾಗರಕಟ್ಟೆ ರೈಲ್ವೇ ಸ್ಟೇಷನ್.......


ಬಂತೇ ರೈಲು....

ಮೈಸೂರಿನಿಂದ ಬೆಳಿಗ್ಗೆ ಏಳುವರೆ ಗಂಟೆಗೆ ಹಾಸನಕ್ಕೆ ಹೊರಟ ರೈಲು ಹಳ್ಳಿಹಳ್ಳಿಗಳಲ್ಲಿ ನಿಲ್ಲಿಸುತ್ತಾ
ಗ್ರಾಮ್ಯಬದುಕಿನ ಕೊಂಡಿಯಂತೆ ಮುಂದೆ ಸಾಗುತ್ತಿತ್ತು.ಕೆಆರ್ಎಸ್ ರೈಲು ನಿಲ್ದಾಣ ದಾಟಿ ಹಚ್ಚಹಸಿರಿನ ಭತ್ತದ ಗದ್ದೆಗಳ ಸೊಬಗನ್ನು ರೈಲಿನ ಪ್ರಯಾಣಿಕರಿಗೆ ಉಣಬಡಿಸುತ್ತಾ ಚುಕ್ ಬುಕ್.......ಎಂದು ಮಂದಗತಿಯಲ್ಲಿ ಸಾಗುತ್ತಾ ಸಾಗರಕಟ್ಟೆಯಲ್ಲಿ ರೈಲು ನಿಂತಾಗ ರೈಲಿನ ಒಳಗೆ ಮಿಂಚಿನ ಸಂಚಾರ.ಹೊರಗೆಹೂವೇ...’ ಎಂಬ ರಾಗ ತೇಲಿ ಬರುತ್ತಿತ್ತು.ಜೊತೆಗೆ ಟೊಮೆಟೋ,ಪಪ್ಪಾಯಿ,ಸೌತೆಕಾಯ್,ಬೀನಿಸು,ಮೂಲಂಗಿ,ಸೊಪ್ಪೇ,,, ಎಂಬ ಧ್ವನಿಗಳು ಸಂತೆಯೊಳಗೆ ನಿಂತ ಭಾವನೆ ಮೂಡಿಸುತ್ತಿದ್ದವು.ಇವೆಲ್ಲವೂ ಮಕ್ಕಳ ಧ್ವನಿಗಳು.
ಶಾಲೆಯ ಸಮವಸ್ತ್ರ ಧರಿಸಿದ್ದ ಮಕ್ಕಳು ತಟ್ಟೆ,ಬುಟ್ಟಿಯಲ್ಲಿ ಹಿಡಿದಿದ್ದ ಹಣ್ಣು,ಹೂವು,ತರಕಾರಿಗಳನ್ನು ರೈಲಿನ ಉದ್ದಕ್ಕೂ ಓಡಾಡುತ್ತಾ ಕಿಟಕಿಯ ಹತ್ತಿರ ಹಿಡಿದೊಡನೆ ಒಳಗಿನ ಪ್ರಯಾಣಿಕರು ಲಗುಬಗೆಯಿಂದ ಕೊಳ್ಳುತ್ತಿದ್ದರು.ತಾವು ತಂದ ಪದಾರ್ಥಗಳು ಖಾಲಿಯಾದ್ದೆ ತಡ ಈ ಮಕ್ಕಳು ಸಂತಸದಿಂದ ಓಡುತ್ತಿದ್ದರು.ರೈಲು ಹೊರಡುವ ವೇಳೆಗೆ ಈ ಮಕ್ಕಳೆಲ್ಲಾ ಮಂಗಮಾಯ! ತರಕಾರಿ ಮಾರುತ್ತಿದ್ದ ಮಕ್ಕಳು ಶಾಲಾ ಸಮವಸ್ತ್ರದಲ್ಲಿದ್ದದ್ದು ,
ಹೀಗೆ ಲಗುಬಗೆಯಲ್ಲಿ ತರಕಾರಿ ಮಾರಿ ಓಡುತ್ತಿದ್ದದ್ದು ನನಗೆ ಆಶ್ಚರ್ಯ ಉಂಟುಮಾಡಿತ್ತು.
ಇದಾಗಿ ಒಂದುವಾರಕ್ಕೆ ಸರಿಯಾಗಿ ಇದೇ ರೈಲಿನಲ್ಲಿ ಸಾಗರಕಟ್ಟೆಗೆ ಬಂದಿಳಿದೆ.ಇಂದೂ ಸಹ ಮಕ್ಕಳ ತರಕಾರಿ ವ್ಯಾಪಾರದ ಭರಾಟೆ ಜೋರಾಗಿಯೇ ಇತ್ತು.
ರೈಲು ಅತ್ತ ಹೋದ ಮೇಲೆ ಮಕ್ಕಳನ್ನು ಹಿಂಬಾಲಿಸಿದೆ.ರೈಲ್ವೇ ಸ್ಟೇಷನ್ ದಾಟಿದೊಡನೆ
ಅದಕ್ಕಂಟಿಕೊಂಡಂತಿದ್ದ ಶಾಲೆ ಆವರಣದೊಳಗೆ ಕಾಲಿಟ್ಟೆ.ಅಲ್ಲೆ ನಿಂತಿದ್ದ ಒಂದಷ್ಟು ಹುಡುಗರು ಒಕ್ಕೊರಲಿನಿಂದ ನಮಸ್ಕಾರ ಸಾ..... ಎಂದು ರಾಗವೆಳೆದು ನನಗೊಂದು ದೊಡ್ಡ ಸೆಲ್ಯೂಟ್ ಹೊಡೆದವು.ಯಾರೋ ಹೊಸ ಮೇಷ್ಟ್ರು ಬಂದಿದ್ದಾರೆ ಎಂದುಕೊಂಡು!


ಅವರನ್ನು ಕರೆದು ನೀವುಗಳು ತರಕಾರಿ ಮಾರುತ್ತಿದ್ದರಲ್ಲ ಅದರ ಬಗ್ಗೆ ಕೇಳಲು ಬಂದೆ ಎಂದೆ.ಮೊದಮೊದಲು ಮಾತನಾಡಲು ಹಿಂಜರಿದ ಮಕ್ಕಳಿಗೆ ನನ್ನ ಕ್ಯಾಮರಾ ತೆಗೆದು ಅವರ ಚಿತ್ರ ತೋರಿಸಿದಾಗ ಮಾತನಾಡ ತೊಡಗಿದರು.
ಸಾಗರಕಟ್ಟೆಯ ಸಿದ್ದೆಶಪ್ರಸಾದ,ಜಲಜ,ವೆಂಕಟೇಶ,ಮಾದೇಶ,ಸವಿತ,ದೊರೆ ಮೊದಲಾದ ಶಾಲಾಮಕ್ಕಳು ಬೆಳಗ್ಗೆ ಮನೆಮುಂದಿನ ತರಕಾರಿಗಳನ್ನು ಕುಯ್ದು ರೈಲ್ವೆ ನಿಲ್ದಾಣದಲ್ಲಿ ಮಾರಿ ದಿನಕ್ಕೆ ಸುಮಾರು ೧೫-೨೦ ರುಪಾಯಿ ಸಂಪಾದಿಸುತ್ತಾರೆ.ಬಂದಹಣ ಏನ್ಮಾಡ್ತೀರಿ..? ಎಂದರೆ ""ಮನೆಗೆ ಕೊಡ್ತೀವಿ ಸಾರ್...ಮನೆಗೂ ಸಹಾಯವಾಗುತ್ತೆ ನಮ್ಮ ಪುಸ್ತಕ ಪೀಜಿಗೂ ದುಡ್ಡಾಗುತ್ತೆ ”ಎನ್ನುತ್ತಾರಿವರು. ಒಂದೆರಡು ರೂಪಾಯಿ ಮಧ್ಯಾಹ್ನ ಅಂಗಡಿಯಲ್ಲಿ ತಿಂಡಿ ತಿನ್ನಲು ಇಸ್ಕತಿವಿ...ಎನ್ನುತ್ತಾ ನಗುತ್ತಾರೆ.ಇಲ್ಲಿನ ತರಕಾರಿಗಳು ತಾಜವಾಗಿರುವುದರಿಂದ,ಬೆಲೆಯೂ ಕಡಿಮೆ ಇರುವುದರಿಂದ ರೈಲಿನ ಪ್ರಯಾಣಿಕರು ಕೊಳ್ಳಲು ಮುಗಿಬೀಳುತ್ತಾರೆ.
ಪ್ರತಿನಿತ್ಯವೂ ಈ ರೈಲಿನಲ್ಲಿ ಪ್ರಯಾಣಿಸುವ ನಾಗರಾಜ ಸಾಗರಕಟ್ಟೆಯನ್ನು ಬಿಟ್ಟರೆ ಮುಂದಿನ ಯಾವುದೆ ರೈಲು ನಿಲ್ದಾಣಗಳಲ್ಲಿ ಹೀಗೆ ಮಕ್ಕಳು ತರಕಾರಿ ಮಾರುವುದು ಕಂಡುಬರುವುದಿಲ್ಲ ಎನ್ನುತ್ತಾರೆ.ಹಾಗಾದರೆ ಈ ಊರಿನ ವಿಶೇಷವಾದರೂ ಏನು?
ಇಲ್ಲಿ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತೆ ಶಾಲೆಯಿರುವುದರಿಂದ ಮಕ್ಕಳು ರೈಲುನಿಲ್ದಾಣದ ಮೂಲಕವೇ ಶಾಲೆಗೆ ತೆರಳುತ್ತಾರೆ.ಜೊತೆಗೆ ಇದೇ ವೇಳೆಗೆ ರೈಲು ಸಂಚರಿಸುವುದರಿಂದ ತಾವು ಬೆಳೆದ ಪದಾರ್ಥಗಳನ್ನು ಮಾರಾಟ ಮಾಡಲು ಅನುಕೂಲ.ಸಾಗರಕಟ್ಟೆ ಊರೂ ಸಹ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತಿರುವುದರಿಂದ ಈ ಊರ ಜನರಿಗೆ ರೈಲುನಿಲ್ದಾಣ ಪ್ರಮುಖ ಮಾರುಕಟ್ಟೆಯಾಗಿದೆ.ರಜಾದಿನಗಳಲ್ಲಿ ಮಕ್ಕಳ ಸೈನ್ಯವೆ ಇಲ್ಲಿ ವ್ಯಾಪಾರದಲ್ಲಿ ತೊಡಗಿರುತ್ತದೆ.
ರೈಲು ಇಲ್ಲಿ ನಿಲ್ಲುವ ಐದಾರು ನಿಮಿಷಗಳಲ್ಲಿ ಮಕ್ಕಳು ನಡೆಸುವ ಚುರುಕಿನ ಸಂತೆ ನೋಡಲು ಬಲು ಚೆಂದ.
ಅಶೋಕ ಉಚ್ಚಂಗಿ

Tuesday, December 16, 2008

ಪುಟ್ಟಮಕ್ಕಳಿಗೆ ದಿನಕ್ಕೊಂದು ಸುಳ್ಳು ಕಥೆ!

ನನಗನ್ನಿಸುತ್ತದೆ ಕಥೆಗಳು ಹುಟ್ಟಿದ್ದು ಮಕ್ಕಳಿಂದಾಗಿ.ಮಕ್ಕಳಿಗೋಸ್ಕರವಾಗಿ.ಮಕ್ಕಳ ಕಥೆಗಳು
ಕ್ರಮೇಣ ಭಢ್ತಿ ಪಡೆದು ಬದಲಾಗುತ್ತಾ ಹಿರಿಯರಿಗೂ ಅನ್ವಯವಾಗುತ್ತಾ,ಇಷ್ಟವಾಗುತ್ತಾ ಮಕ್ಕಳ ಕಥೆ,
ಹಿರಿಯರ ಕಥೆ, ಪುರಾಣ,ಇತಿಹಾಸ,ಕಾದಂಬರಿ ಎಂದೆಲ್ಲಾ ವಿಂಗಡಣೆಯಾಗುತ್ತಾ ಇವತ್ತಿನ ಈ ಹಂತಕ್ಕೆ ಬಂದು ತಲುಪಿವೆ.ಎಂದೋ ಎಲ್ಲೋ ಕೇಳಿದ/ನೋಡಿದ ಘಟನೆಗಳು ಬಾಯಿಂದ ಬಾಯಿಗೆ ಹರಡುತ್ತಾ ಕಥೆಯ ರೂಪಪಡೆಯುತ್ತವೆ, ನೀತಿ ಅನೀತಿಗಳ ವಿಮರ್ಶೆ ಕತೆಯ ಹುಟ್ಟಿಗೆ ಕಾರಣವಾಗುತ್ತವೆ.
ಐದು ವರ್ಷ ದಾಟಿದ ಮಕ್ಕಳಿಗೆ ಹೇಳಲು ನಮ್ಮಲ್ಲಿ ಕತೆಗಳ ಸಾಕಷ್ಟು ಸರಕಿದೆ.ಆದರೆ ಈಗಿನ್ನೂ
ತನ್ನ ಪರಿಸರವನ್ನು ಅರ್ಥಮಾಡಿಕೊಳ್ಳುವ ಹಂತದಲ್ಲಿರುವ ಮೂರುನಾಲ್ಕು ವರ್ಷದ ಮಕ್ಕಳಿಗೆ ಕತೆ ಹೇಳಲು ನಮ್ಮಲ್ಲಿ ಪುಸ್ತಕಗಳು ಅಲಭ್ಯ.ಚಂದಮಾಮದ ಕತೆಗಳು,ಪತ್ರಿಕೆ,ಮ್ಯಾಗಝಿನಿನ
ಕತೆಗಳು,ದಿನಕ್ಕೊಂದು ಕತೆ ಇವು ಈ ವಯಸ್ಸಿಗೆ ಅರ್ಥವಾಗದು.

ಆದ್ದರಿಂದ ಎಲ್ಲಾ ತಂದೆತಾಯಂದಿರು,ಅಜ್ಜಅಜ್ಜಿಯರು ತಾವೇ ಪುಟ್ಟಪುಟ್ಟ ಕತೆಗಳನ್ನು ಹೆಣೆಯುತ್ತಾ ಈ ವಯಸ್ಸಿನ ಪುಟಾಣಿಗಳಿಗೆ ಹೇಳುತ್ತಾರೆ ಅನಿಸುತ್ತೆ.
ನನ್ನ ಮಗಳು ಇಂಪು ಗೆ ಎರಡು ವರ್ಷ ಎಂಟು ತಿಂಗಳು.ಈಗಲೇ ಕತೆ ಹೇಳೆಂದು ದುಂಬಾಲು ಬೀಳುತ್ತಾಳೆ.ಈಗಿನ್ನು ತನ್ನ ಪರಿಸರವನ್ನು ತಿಳಿಯುತ್ತಿರುವ ಇವಳಿಗೆ ಎಂತಾ ಕತೆ ಹೇಳಬಹುದು.ಆದರೆ ಕತೆಯಿಲ್ಲದೆ ಇವಳಿಗೆ ನಿದ್ದೇಯೇ ಬರದು.ಆ ಕಾರಣ ನಾನೇ ಕತೆಗಾರನಾಗಿದ್ದೇನೆ.
ಇವಳ ಕುತೂಹಲ ತಣಿಸಲು,ನಿದ್ದೆಗೆ ಜಾರಿಸಲು ನನ್ನ ಕಲ್ಪನೆಯೆಂಬ ಸಮುದ್ರಕ್ಕೇ ಗಾಳಹಾಕಿ ಎಲ್ಲೋ ಒಂದು ಕಥಾವಸ್ತುವೆಂಬ ಮೀನು ಹಿಡಿದು ಅದನ್ನೇ ಎಳೆಯುತ್ತಾ ಕಲ್ಪನಾಶಕ್ತಿಗೆ ಸವಾಲು ಹಾಕುತ್ತಾ ಎಂತದೋ ಒಂದು ಕಥೆ ಕಟ್ಟುತ್ತೇನೆ. ಅದು ಎತ್ತೇತ್ತಲೋ ಸಾಗುತ್ತ ಕಡೆಗೂ ಒಂದು
ತಾತ್ವಿಕ ಅಂತ್ಯ ಕಾಣುತ್ತದೆ.ಒಟ್ಟಿನಲ್ಲಿ ‘ದಿನಕ್ಕೊಂದು ಸುಳ್ಳು ಕಥೆ’ ಹೇಳುತ್ತೇನೆ.
ನನ್ನ ಮಗಳಿಗೆ ನಾನು ಹೇಳುವ ಕಥೆ ಹೀಗಿರುತ್ತದೆ.
ನಾನು; ಮಗು ಯಾವ ಕಥೆ ಹೇಳಲಿ?
ಇಂಪು:ಮಿಯಾಂ ಕಥೆ ಬೇಕು.
ನಾ:ಒಂದೂರಲ್ಲಿ ಒಂದು ಪುಟ್ಟು ಮಿಯಾವ್ ಇತ್ತು.ಅದರ ಹೆಸರೇನು?

ಇಂಪು:ಮಿನ್ನಿ.... (ದಿನಕ್ಕೊಂದು ಹೆಸರು ಕಟ್ಟುತ್ತಾಳೆ

ನಾನು:ಅದು ಒಂದಿನ ಪುಟ್ಟಪಾಪು ಜೊತೆ ಆಟವಾಡುತ್ತಾ ಇತ್ತಂತೆ.ಪಾಪು ಹೆಸರೇನು ಹೇಳು?

ಇಂಪು:ಸ್ವಲ್ಪ ಹೊತ್ತು ಯೋಚಿಸಿ ನಂದನ್.... ಎನ್ನುತ್ತಾಳೆ.

ಹೀಗೆ ಮಗುವಿನೊಂದಿಗೆ ಪ್ರಶ್ನೋತ್ತರದಂತೆ ಕತೆ ಸಾಗುತ್ತದೆ.

ನನ್ನ ಮಗಳಿಗೆ ಕತೆಯ ಮಧ್ಯೆ ಪ್ರಶ್ನೆಗಳು ಏಳುತ್ತವೆ.ಇವೆಲ್ಲವನ್ನೂ ಬಗೆಹರಿಸಿ ಬೆಕ್ಕು ನೀರಿನ ಗುಂಡಿಯಲ್ಲಿ ಬಗ್ಗಿ ನೋಡುತ್ತಾ ನೀರಿಗೆ ಬಿದ್ದಿತಂತೆ,ಆಗ ಪುಟ್ಟ ಪಾಪ ಅವರ ಅಪ್ಪನನ್ನು ಕರೆದು ಮಿಯಾವ್‌ನನ್ನು ಮೇಲೆ ಎತ್ತಿಸಿತಂತೆ.ಮಿನ್ನಿ ಡ್ಯಾನ್ಸ ಮಾಡುತ್ತಾ ಪಾಪುಗೆ ಥ್ಯಾಂಕ್ಸ್ ಹೇಳಿತಂತೆ ಎಂದು ಏನೋ ಒಂದು ಕತೆಕಟ್ಟಿ ಹೇಳುತ್ತೇನೆ.ನೀರಿನ ಹತ್ತಿರ ಒಬ್ಬರೇ ಹೋಗಬಾರದು,ಬಗ್ಗಿನೋಡಬಾರದು ಎಂದು ತಿಳಿಸಿ ಕತೆ ಮುಗಿಸುತ್ತೇನೆ
ಇದರಿಂದ ಮಗುವಿಗೆ ತಪ್ಪು ಒಪ್ಪುಗಳ ಅರಿವಾಗುವುದರೊಂದಿಗೆ,ಸಮಯಪ್ರಜ್ಞೆ,ಪ್ರೀತಿ,ಅನುಕಂಪ ಮೊದಲಾದ ಗುಣಗಳು ಅರಿವಾಗುತ್ತದೆ ಎಂಬ ಅಭಿಪ್ರಾಯ ನನ್ನದು.
ಕತೆಗಳು ಮಕ್ಕಳ ಮೇಲೆ ಉಂಟುಮಾಡುವ ಪರಿಣಾಮವನ್ನು ಅನುಪಮ ನಿರಂಜನರು ದಿನಕ್ಕೊಂದು ಕಥೆಯಲ್ಲಿ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ.ಕಥೆಗಳಿಂದ ಮಕ್ಕಳಿಗೆ ಕಲ್ಪನಾಶಕ್ತಿ ಬೆಳೆಯುತ್ತದೆ,ಕುತೂಹಲ ತಣಿಯುತ್ತದೆ,ಬುದ್ದಿ ಚಿಗುರುತ್ತದೆ,ಸಾಹಸಪ್ರವೃತ್ತಿ ಹೆಚ್ಚುತ್ತದೆ,ಅನುಕಂಪ ಬೆಳೆಯುತ್ತದೆ.ದುಷ್ಟರಿಗೆ ಸೋಲು,ಸತ್ಯವಂತರಿಗೆ ಜಯ ಎಂಬ ನೀತಿ ಮನದಟ್ಟಾಗುತ್ತದೆ.ಹೀಗೆ ಕಥೆಗಳು ಮಗುವಿನ ಬೌದ್ದಿಕ ಬೆಳವಣಿಗೆಗೆ ನೆರವಾಗುತ್ತದೆ.
ಕಥೆಗಳು ಮಕ್ಕಳಿಗೆ ಎಷ್ಟು ಉಪಯೋಗವೂ ದೊಡ್ಡವರಿಗೂ ಅಷ್ಟೇ ಉಪಯೋಗ.ನಿತ್ಯಬದುಕಿನಲ್ಲಿ ನೂರೆಂಟು ವ್ಯವಹಾರಗಳ ಜಂಜಟಾದಲ್ಲಿ ದೊಡ್ಡದೊಡ್ಡದಾಗಿಯೇ ಯೋಚಿಸುವ ನಾವು ಒಂದೈದು ನಿಮೀಷ ಹೀಗೆ ಸಿಲ್ಲಿ ಕಲ್ಪನೆಗಳನ್ನು ಮನಸ್ಸಿಗೆ ತಂದುಕೊಂಡು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತರೆ
ಮನಸ್ಸು ನಿರಮ್ಮಳವಾದಿತೆಂಬುದು ನನ್ನ ಅಭಿಪ್ರಾಯ.
ನೀವೇನಂತೀರಿ?

ನಿರೀಕ್ಷಿಸಿ----ಮುಂದೆ ಬರಲಿದೆ--
ಈ ಗೌರಿ ಅಪ್ರತಿಮ ಸುಂದರಿ!!!