Thursday, December 25, 2008

ಕ್ರಿಸ್‌ಮಸ್ ಚಕ್ಕುಲಿ,ಗರಿಗರಿ ವ್ಹೀಲ್!


ಆಹಾ....! ಕ್ರಿಸ್‌ಮಸ್ ತಿನಿಸು...ಬಲು ಸೊಗಸು

ಕ್ರಿಶ್ಚಿಯನ್ನರು ಹಬ್ಬಗಳನ್ನು ಅದರಲ್ಲೂ ಮುಖ್ಯವಾಗಿ ಕ್ರಿಸ್‌ಮಸ್ ಅನ್ನು ಕೇಕ್,ವೈನ್,ನಾನ್‌ವೆಜ್ ತಯಾರಿಸಿ ಚರ್ಚ್‌ಗೆ ಹೋಗಿ ಪ್ರೇಯರ್ ಮಾಡಿ ಮನೆಯಲ್ಲೋ ಇಲ್ಲ ಪಾರ್ಟಿಯಲ್ಲೋ ಕುಡಿದು ಕುಪ್ಪಳಿಸುತ್ತಾರೆ ಎಂಬುದು ನನ್ನ ತಿಳುವಳಿಕೆಯಾಗಿತ್ತು.
ನನ್ನ ಪತ್ನಿಯ ಗೆಳತಿಯೊಬ್ಬರು ನಮ್ಮ ಮನೆ ಹತ್ತಿರವೇ ಇದ್ದಾರೆ.ಅವರ ಹೆಸರು ಉಷಾ ಪಿಂಟೋ.ಬ್ಯೂಟಿ ಪಾರ್ಲರ್ ನಡೆಸುತ್ತಾರೆ ಕೊಂಕಣಿ ಕ್ರಿಶ್ಚಿಯನ್ನರು.(ಬ್ಯೂಟಿ ಪಾರ್ಲರ್‌ನವರು ಹೆಂಗಸರಿಗೆ ಆತ್ಮೀಯರಾಗೋದರಲ್ಲಿ ವಿಶೇಷವೇನಿಲ್ಲ ಎನ್ನುತ್ತೀರಾ?,,, ನಿಮ್ಮ ಮಾತು ನಿಜ ಅನ್ನಿ!) :)ಆದರೆ ಇವರು ನನ್ನ ಪತ್ನಿಗೆ ತುಂಬಾ ಆತ್ಮೀಯರು.ನಮ್ಮ ಕುಟುಂಬಕ್ಕೂ.
ನಾನು ಈಗ ಹೇಳಹೊರಟಿದ್ದು ಕ್ರಿಸ್ಮಸ್ ಆಚರಣೆಯ ಬಗ್ಗೆ ನನಗಿದ್ದ ಅಭಿಪ್ರಾಯ ಬದಲಾಯಿಸಿಕೊಳ್ಳಬೇಕಾದ ಬಗ್ಗೆ.ಇವರು ಈಗ ತಾನೆ ನಮ್ಮ ಮನೆಗೆ ಬಂದಿದ್ದರು.ಬೆಳಿಗ್ಗೆಯಿಂದ ಹಬ್ಬದ ಆಚರಣೆಯಲ್ಲಿ ಬಿಜಿಯಾಗಿದ್ದರೆನಿಸುತ್ತೆ.ಬಳಲಿದ್ದರು. ಏದುಸಿರು ಬಿಡುತ್ತಾ ಒಂದೈದು ನಿಮಿಷ ಮಾತನಾಡಿ ಹಬ್ಬದ ತಿಂಡಿಗಳನ್ನು ಕೊಟ್ಟು ಹೋದರು.ಕೇಕ್,ಚಕ್ಕುಲಿ,ರವೆ ಉಂಡೆ,ಸಿಹಿ ಉಂಡೆ,ಇನ್ನೆಂತದೋ ಒಂದು ಸಿಹಿಯಾದ ಗರಿಗರಿಯಾದ ವೀಲ್! ಇನ್ನು ಎಂತೆಂತದೋ ಸಿಹಿತಿಂಡಿಗಳು.ಜೊತೆಗೆ ಮನೆಯಲ್ಲೇ ಅವರು ತಯಾರಿಸಿದ ತಾಜಾ ವೈನ್ ನೀಡಿ ಶುಭ ಹಾರೈಸಿ ಗಡಿಬಿಡಿಯಲ್ಲಿ ಹೊರಟರು.ನಾಳೆ ಮಂಗಳೂರಿಗೆ ಹೋಗಬೇಕಂತೆ.

ಈ ತಿಂಡಿಗಳ ಹೆಸರು ಕೇಳಲು ಮನಸ್ಸಿದ್ದರೂ ಅವರ ತರಾತುರಿ ನೋಡಿ ಸುಮ್ಮನಾದೆ.ಬೆಳಿಗ್ಗೆ
ಮನೆಯಲ್ಲಿ ಪೂಜೆ ಮಾಡಿ ಇಡ್ಲಿ ಮಾಡಿದ್ದರಂತೆ.(ಇದನ್ನು ಮಾಡಲೇಬೇಕಂತೆ).ಇವರು ಕ್ರಿಸ್‌ಮಸ್ ಅನ್ನು ಹೀಗೆ ನಮ್ಮ ಸಂಪ್ರದಾಯಕ್ಕೆ ಹತ್ತಿರವಾಗಿ ಆಚರಿಸುತ್ತಾರೆ ಎಂಬುದು ನನಗರಿವಾದಾಗ ಈ ಬಗ್ಗೆ ಕುತೂಹಲ ಮೂಡಿತು.ಈ ಬಗ್ಗೆ ಕೇಳಿ ತಿಳಿದುಕೋಳ್ಳಬೇಕೆನಿಸಿತು.ಅವರ ಆತುರ ನೋಡಿ ಸುಮ್ಮನಾದೆ.ಅವರು ತಿರುಗಿ ಬಂದ ನಂತರ ಈ ಬಗ್ಗೆ ಕೇಳಿ ತಿಳಿದು ಕೊಂಡು ಬರೆಯುತ್ತೇನೆ.
ಈ ತಿಂಡಿಗಳನ್ನು ನೋಡಿದಾಗ ನನಗಂತೂ ಕೃಷ್ಣ ಜನ್ಮಾಷ್ಟಮಿ ನೆನಪಾಯಿತು.ನಾನು ಲಕ್ಷ್ಮಿ ಟಾಕಿಸ್ ಹಿಂಭಾಗ (ಮೈಸೂರು) ರೂಮಿನಲ್ಲಿದ್ದಾಗ ಅಲ್ಲಿನ ಅಯ್ಯಂಗಾರ್ ಅಂಕಲ್ ಮನೆಯಲ್ಲಿ ಮಾಡುತ್ತಿದ್ದ ಕೃಷ್ಣ ಜನ್ಮಾಷ್ಟಮಿಯ
ಕುರುಕಲು ತಿಂಡಿಗಳು ನೆನಪಾದವು. ಆಹಾ ಏನು ರುಚಿ....ಈಗಲೂ ಬಾಯಲ್ಲಿ ನೀರೂರುತ್ತೆ.(ಕೃಷ್ಣ ಜನ್ಮಾಷ್ಟಮಿ ಹತ್ತಿರ ಬಂದಂತೆ ಅಯ್ಯಂಗಾರರನ್ನು ವಿಶೇಷ ಪ್ರೀತಿಯಿಂದ ಮಾತನಾಡಿಸುತ್ತಿದ್ದೆ......ನನ್ನನ್ನು ಮರೆತು ಬಿಡಬಾರದೆಂದು..)
ಎಲ್ಲಿಯ ಕ್ರಿಸ್ಮಸ್ ಎಲ್ಲಿಯ ಕೃಷ್ಣ ಜನ್ಮಾಷ್ಟಮಿ.ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ? ಧರ್ಮ ಬೇರಾದರೂ ಆಚರಣೆಯಲ್ಲಿ ಅದೆಷ್ಟು ಸಾಮ್ಯತೆ?... ರ್ಮ ಹಲವು ಭಾವ ಒಂದು...! ಇದೇ ಅಲ್ಲವೇ ಇಂದಿನ ಭಾರತಕ್ಕೆ ಬೇಕಿರುವುದು....
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು!!!
--ಅಶೋಕ ಉಚ್ಚಂಗಿ.
ಸಾಂತಾಕ್ಲಾಸ್ ಚಿತ್ರ-ಗೂಗಲ್ ಕೃಪೆ.

3 comments:

shivu K said...

ಆಶೋಕ್,
ಕ್ರಿಸ್‌ಮಸ್ ಹಬ್ಬದ ನಮ್ಮ ಸಂಪ್ರದಾಯಕ್ಕೆ ಹತ್ತಿರವಾದ ರೀತಿ ಆಚರಣೆಯನ್ನು ಓದಿ ಖುಷಿಯಾಯಿತು. ಅದರ ಪೂರ್ತಿ ವಿವರಣೆಯನ್ನು ಬೇಗ ಹಾಕಿ ಕಾಯುತ್ತಿರುತ್ತೇನೆ.
ಶಿವು.

Harish - ಹರೀಶ said...

ಎಲ್ಲಿಯ ಕ್ರಿಸ್‌ಮಸ್ ಎಲ್ಲಿಯ ಕೃಷ್ಣ ಜನ್ಮಾಷ್ಟಮಿ.ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ? ಧರ್ಮ ಬೇರಾದರೂ ಆಚರಣೆಯಲ್ಲಿ ಅದೆಷ್ಟು ಸಾಮ್ಯತೆ?... ಧರ್ಮ ಹಲವು ಭಾವ ಒಂದು...! ಇದೇ ಅಲ್ಲವೇ ಇಂದಿನ ಭಾರತಕ್ಕೆ ಬೇಕಿರುವುದು...

ಹೌದು!

ಸಿ ಮರಿಜೋಸೆಫ್ said...

ಅಶೋಕರೆ, ನನ್ನ ಬ್ಲಾಗ್ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ನಿಮ್ಮ ಬ್ಲಾಗಿನ ಗಮನ ಸೆಳೆದಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗ್ ತುಂಬಾ ವೈವಿಧ್ಯಮಯವಾಗಿದೆ.
ನೀವು ಹೆಸರಿಸಿದ ಅ ಗರಿಗರಿ ವ್ಹೀಲ್ ಅನ್ನು rose cookies ಎನ್ನುತ್ತಾರೆ. ಮೈದಾ, ಸಕ್ಕರೆ, ಹಾಲು ಮತ್ತು ಕೋಳಿಮೊಟ್ಟೆಗಳ ಮಿಶ್ರಣದ ತೆಳು ಕಣಕದಲ್ಲಿ, ಹಲವು ಉಂಗುರಗಳನ್ನುಅಡ್ಡಡ್ಡಲಾಗಿ ಬೆಸೆದ ಒಂದು ಲೋಹದ ಅಚ್ಚನ್ನು ಇಟ್ಟು ಅದನ್ನೆತ್ತಿ ನೇರವಾಗಿ ಒಲೆಯ ಮೇಲಿನ ಪಾತ್ರೆಯಲ್ಲಿ ಕುದಿಯುತ್ತಿರುವ ಎಣ್ಣೆಗೆ ಹಾಕಿ ಕರಿಯುತ್ತೇವೆ. ಕಣಕಕ್ಕೆ ಒಂದುಚೂರು ಬೇಕಿಂಗ್ ಸೋಡ ಹಾಕಿದ್ದರೆ ಈ ರೋಸ್‌ ಕುಕ್ಕೀಸ್ ಗರಿಗರಿಯಾಗಿರುತ್ತದೆ. ಕನ್ನಡದಲ್ಲಿ ಇದಕ್ಕಿನ್ನೂ ಹೆಸರಿಟ್ಟಿಲ್ಲ. ನನ್ನ ಮಲಯಾಳಿ ಸಹೋದ್ಯೋಗಿಯೊಬ್ಬ ಅವರ ಭಾಷೆಯಲ್ಲಿ ಅಚ್ಚಪ್ಪಂ ಎನ್ನುತ್ತಾರೆ ಎಂದ. ಅಚ್ಚಿನ ಸಹಾಯದಿಂದ ತಯಾರು ಮಾಡಿದ ಅಪ್ಪ, ಚೆನ್ನಾಗಿದೆ.