ಹಳ್ಳಿ ಜಾತ್ರೆಗಳಲ್ಲೊಂದು ಸುತ್ತು....
ನಾನು ಚಿಕ್ಕಂದಿನಲ್ಲಿ ನೋಡಿದ ಜಾತ್ರೆಗಳೆಂದರೆ ಕೊಂಗಳ್ಳಿ ಜಾತ್ರೆ,ಗುಡುಗಳಲೆ ಜಾತ್ರೆ,ಟೆಂಪಲ್ ಜಾತ್ರೆ...ಇತ್ಯಾದಿ.ಈ ಊರುಗಳು ಮಲೆನಾಡಿನ ಮಡಿಲಲ್ಲಿವೆ.ಮಲೆನಾಡಿನ ಸಕಲೇಶಪುರ ತಾಲೋಕಿನ ಕೊಂಗಳ್ಳಿ,ಕೊಡಗು ಜಿಲ್ಲೆಯ ಶನಿವಾರಸಂತೆಯ ಸಮೀಪದ ಗುಡುಗಳಲೆ ಜಾತ್ರೆಗಳು ನಮ್ಮ ಪ್ರದೇಶದಲ್ಲಿ ದೊಡ್ಡ ಜಾತ್ರೆಗಳು.
ಸಾಮಾನ್ಯವಾಗಿ ಮಲೆನಾಡಿನ ಜಾತ್ರೆಗಳಲ್ಲಿ ಉತ್ಸವ,ಸುಗ್ಗಿಗಳಿಗೆ ಪ್ರಾಧಾನ್ಯ.ನಾನು ನೋಡಿದ ಕೊಂಗಳ್ಳಿ ಜಾತ್ರೆಯಲ್ಲಿ ಕಾಡಿನ ನಡುವಿರುವ ದೇಗುಲದಲ್ಲಿ ಪೂಜೆ ಸಲ್ಲಿಸಿ,ಅಥವಾ ಹರಕೆ ತೀರಿಸಿ ದೇಗುಲದ ಸಮೀಪದಲ್ಲಿನ ಡೇರೆಗಳಲ್ಲಿ ಸಿಗುತ್ತಿದ್ದ ಪೀಪಿ,ಬಲೂನು,ಸಿಹಿತಿಂಡಿಗಳು,ಬತ್ತಾಸು,ಪುರಿ,ಕಾರಾಸೇವಿಗೆ,ಬಟ್ಟೆ,ಚಪ್ಪಲಿಗಳನ್ನು ಜಾತ್ರೆಗೆ ಬಂದ ಜನ ಕೊಳ್ಳುತ್ತಿದ್ದರು.ಕಾಡಿನ ನಡುವೆ ನಿರ್ಜನ ದೇಗುಲದೆದುರು ವರ್ಷದಲ್ಲೊಮ್ಮೆ ಸುಮಾರು ಒಂದು ಸಾವಿರ ಜನ ಒಟ್ಟಿಗೆ ಸೇರಿ ಜಾತ್ರೆಯಾಗುತ್ತಿತ್ತು.ಮಲೆನಾಡಿನ ಈ ಜಾತ್ರೆ ಬಯಲುಸೀಮೆಯ ವಾರದ ಸಂತೆಗೆ ಸಮವೆನಿಸುತ್ತಿತ್ತು ಎಂದರೆ ತಪ್ಪಾಗಲಾರದು.ಇನ್ನು ಗುಡುಗಳಲೆ ಜಾತ್ರೆ ಒಂದುವಾರಗಳ ಕಾಲ ನಡೆದು ಆಕರ್ಷಕವೆನಿಸುತ್ತಿತ್ತು.ಈ ವೇಳೆಯಲ್ಲಿ ಸರ್ಕಸ್,ನಾಟಕಗಳು,ಸಂಚಾರಿ ಸಿನಿಮಾಗಳ ಪ್ರದರ್ಶನವಿರುತ್ತಿತ್ತು.ರಾಟಾಳೆ,ತೊಟ್ಟಿಲುಗಳು ಮಕ್ಕಳಿಗೆ ಪ್ರಿಯವಾಗಿತ್ತು.ಇತ್ತೀಚೆಗೆ ಇವು ತಮ್ಮ ಹಿಂದಿನ ಸೊಗಡನ್ನು ಕಳೆದುಕೊಂಡಿವೆ.
ಇಂದಿನ ದಿನಗಳಲ್ಲಿ ಜಾತ್ರೆಗಳು ನಮ್ಮ ಜನಪದರಿಂದ ದೂರಾಯಿತೇನೋ ಎಂಬ ಭಾವನೆ ನನ್ನದಾಗಿತ್ತು.ಆದರೆ ಬಯಲು ಸೀಮೆಯ ಕೆಲವು ಹಳ್ಳಿ,ಪಟ್ಟಣಗಳಲಿ ಜಾತ್ರೆಯ ಸೊಗಡು ಇನ್ನೂ ಮಾಸಿಲ್ಲ.ಹಿಂದಿನ ವೈಭವ ಈಗಿಲ್ಲವಾದರೂ ತಕ್ಕ ಮಟ್ಟಿಗೆ ‘ಜಾನಪದ ಜಾತ್ರೆಗಳು’ ಎನಿಸಿಕೊಳ್ಳುತ್ತವೆ.
ನಿನ್ನೆ ರಥಸಪ್ತಮಿಯ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ರಥೋತ್ಸವವಿತ್ತು.ಇಂದು ಅಲ್ಲಿ ಜಾತ್ರೆಯೂ ಸಹ.
ಇಲ್ಲಿನ ಜಾತ್ರೆ ನೋಡಿದಾಗ ಮನಸ್ಸಿಗೆ ನೆಮ್ಮದಿಯಾಯಿತು.ಕಾರಣ ನಮ್ಮ ಜನಪದರ ಆಟಗಳು,ಆಚರಣೆಗಳು,ತಿಂಡಿತಿನಿಸುಗಳು,ಜಾತ್ರೆ ವಾತಾವರಣ ಇನ್ನೂ ಹಾಗೆ ಉಳಿದಿದೆಯಲ್ಲಾ ಎಂದು ಸಂತಸವಾಯಿತು.
ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇಗುಲದ ಹಾದಿಯ ಇಕ್ಕೆಲದಲ್ಲಿ ಮತ್ತು ಪಕ್ಕದ ವಿಶಾಲ ಅಂಗಳಲ್ಲಿ ಭರ್ಜರಿಯಾಗಿ ಜಾತ್ರೆ ನಡೆಯುತ್ತಿತ್ತು.ಗತಕಾಲದ ನೆನಪಿಗೆ ಸಾಕ್ಷಿಯಂತಿದ್ದ ಈ ಜಾತ್ರೆಯಲ್ಲಿ ಒಂದು ಸುತ್ತುಬಂದು ಇಲ್ಲಿನ ವಿಶೇಷತೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆ.ಮಾಸಿದ ನೆನಪಿಗೆ ಹೊಳಪು ನೀಡಿದೆ.
ಪಿಂಗಾಣಿಯ ಭರಣಿ,ಕುಡಿಕೆ,ಜಾಡಿ,ಮಡಿಕೆ-ಕುಡಿಕೆಗಳು,ಟೇಫು-ರಿಬ್ಬನ್ನುಗಳು,ಮಹಿಳೆಯರ ಅಲಂಕಾರಿಕ ವಸ್ತುಗಳು,ಮಕ್ಕಳ ಆಟದ ಸಾಮಾನುಗಳು,ಕಲ್ಲಂಗಡಿ,ಕಬ್ಬು,ಸೊಪ್ಪಿನ ಕಡಲೆ,ಬಣ್ಣಬಣ್ಣದ ಮಿಠಾಯಿಗಳು,ಬೆಂಡುಬತ್ತಾಸುಗಳು,ಹಾವಾಡಿಗರು,ಗಿಣಿಶಾಸ್ತ್ರದವರು,
ಕೋಲೆಬಸವರು,ವಿಧವಿಧವಾದ ಹಳ್ಳಿ ಗ್ಯಾಂಬ್ಲಿಂಗ್ ಕ್ರೀಡೆಯಲ್ಲಿ ಮುಳುಗಿಹೋಗಿದ್ದ ಹಳ್ಳಿಗರು,ಮಕ್ಕಳು.....ಹೀಗೆ ಗ್ರಾಮ್ಯ ಪ್ರದೇಶದವರಿಗೆ ಇಷ್ಟವಾಗುವ ಪಟ್ಟಣಿಗರಿಂದ ‘ಲೋಕಲ್ ’ ಎಂದೆನಿಸಿಕೊಳ್ಳುವ ಈ ಜಾತ್ರೆಯ ಸವಿಯನ್ನು ಈ ವ್ಯಕ್ತಿಯಂತೆಯೇ ನಾನೂ ನನ್ನ ಮಗಳನ್ನು ಭುಜದ ಮೇಲೆ ಕೋರಿಸಿಕೊಂಡು ಸುತ್ತಿ ಸವಿದೆ.ಆದರೆ ನನ್ನ ಮಗಳಿಗೆ ಎಷ್ಟು ಹೇಳಿದರೂ ಅವಳು ಇದನ್ನು ಜಾತ್ರೆ ಎನ್ನುತ್ತಿಲ್ಲ.......ಎಗ್ಜಿಬಿಸನ್...ಎಂದು ಮುದ್ದುಮುದ್ದಾಗಿ ಉಲಿಯುತ್ತಾಳೆ....ಜಾತ್ರೆ ಚಿತ್ರಗಳು.ಜನ ಮರುಳೋ....ಜಾತ್ರೆ ಮರುಳೋ...... 
ಬಳೆ ಎಸೆದು....ಬಲೆ ಹಾಕು...!
ಮಿಠಾಯಿ
ಅಂಗಡಿ.......
ಹದ್ದು ಹಾರುತಿದೆ ನೋಡಿದಿರಾ.......?
ಆ ಒಂದು ಮಧ್ಯಾನ್ಹ ನೆತ್ತಿ ಸುಡುವ ರಣಬಿಸಿಲಿನಲ್ಲಿ ಮನೆ ಸೇರುವ ವೇಳೆಗೆ ಮೋಡಗಳು ಮುಗಿಲೇರತೊಡಗಿದ್ದವು.
ಹಿಂಜಿದ ಅರಳೆಯಂತಹ ಮೋಡಗಳ ನಡುವೆಯೇ
ಬಿಸಿಲಿನ ಝಳ ಜೋರಾಗಿತ್ತು.
ಗೇಟು ದಾಟಿ ಮನೆ ಅಂಗಳಕ್ಕೆ ಕಾಲಿಟ್ಟಾಗ
ಸಣ್ಣ ನೆರಳೊಂದು ಸೊಯ್ಯನೆ ಅಂಗಳ ದಾಟಿ ಮನೆಯ
ಗೋಡೆ ಹತ್ತಿ ಮರೆಯಾಯಿತು.ಕತ್ತೆತ್ತಿ ನೋಡಿದೆ.ವಿಶಾಲ ಆಗಸದಲ್ಲಿ ಅರೆಬರೆ ಕವಿದ ಮೋಡಗಳ ನಡುವೆ ಮೂರ್
ನಾಲ್ಕು ಹದ್ದುಗಳು ಗಿರಕಿ ಹೊಡೆಯುತ್ತಿದ್ದವು.ಹೀಗೆ ಸುತ್ತುತ್ತಿದ್ದ ಗಿಡುಗವೊಂದು ಕೆಳಗಿಳಿಯ ತೊಡಗಿ ನನ್ನ ಇರುವಿಕೆಯಿಂದ ಮತ್ತೆ ಮೇಲೇರಿದ್ದರ ಪರಿಣಾಮ ನೆರಳು ನನ್ನ ಮುಂದೆ ಸೊಯ್ಯನೆ ಸಾಗಿತ್ತು. ಆದರೆ ವಾಸ್ತವವೇ ಬೇರೆಯಾಗಿತ್ತು.ಹದ್ದು ನನಗೆ ಹೆದರಿ ಮೇಲೆ ಹಾರಲಿಲ್ಲ.ಪಕ್ಕದ ಸೈಟಿನಲ್ಲಿದ್ದ ಹುತ್ತದ ಒಳಗಿನಿಂದ ಮಳೆಹುಳುಗಳು ಹೊರಬಂದು ಹಾರುತ್ತಿದ್ದವು.ಮೇಲೆಸುತ್ತುತ್ತಿದ್ದ ಹದ್ದುಗಳು ಮಳೆಹುಳುಗಳು ಹಾರಿದ್ದೇ ತಡ ಗಾಳಿಯಲ್ಲಿ ತೇಲಿಬಂದು
ಮಳೆಹುಳುಗಳನ್ನು ಹಿಡಿದು ರಾಕೇಟ್
ನಂತೆ ಮೇಲೇರುತ್ತಿದ್ದವು.ಹದ್ದುಗಳು ಮಳೆಹುಳುಗಳ ಗುಳಂ ಮಾಡುವ ಪರಿಯನ್ನು ನೋಡುತ್ತಿದ್ದ ನನಗೆ
ತೇಜಸ್ವಿಯವರ "ಹುಲಿಯೂರಿನ ಸರಹದ್ದು" ಕಥೆ ನೆನಪಾಯಿತು.
ಕಥೆಗೂ ವಾಸ್ತವಕ್ಕೂ ಇದ್ದ ವ್ಯತ್ಯಾಸ ಇಷ್ಟೆ.ಇಲ್ಲಿ ಹದ್ದು ಮಳೆಹುಳ ಭಕ್ಷಣೆಗೆ
ಆಗಸದಲ್ಲಿ ಸುತ್ತುತ್ತಿದೆ.ಹುಲಿಯೂರಿನ ಸರಹದ್ದಿನಲ್ಲಿ ಮಳೆಹುಳುಗಳನ್ನು ಹಿಡಿಯುವುದರಲ್ಲಿ ಮಗ್ನವಾದ ಕೋಳಿಪಿಳ್ಳೆಗಳನ್ನು ಹಿಡಿಯಲು ಗರುಡ ಹೊಂಚು ಹಾಕುತ್ತಿತ್ತು.
ಇಲ್ಲಿ ನಡೆಯುತ್ತಿದ್ದ ಮಳೆಹುಳುಗಳ ಬೇಟೆ,ಇಲ್ಲಿನ ವಾತಾವರಣ ತೇಜಸ್ವಿಯವರ ಕಥನದ ರೂಪಕದಂತಿತ್ತು.ಇಲ್ಲಿನ ಸನ್ನಿವೇಶವನ್ನು ಗಮನಿಸಿದಾಗ ತೇಜಸ್ವಿಯವರು ನಿಸರ್ಗದ ಸಣ್ಣ ಸಣ್ಣ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಷ್ಟು ಚೆನ್ನಾಗಿ ಅನುಭವಿಸಿ ಬರೆದಿದ್ದಾರೆ ಎಂದೆನಿಸಿತು. ತೇಜಸ್ವಿಯವರ ಹುಲಿಯೂರಿನ ಸರಹದ್ದಿನಲ್ಲಿ ಬರುವ ಘಟನೆಗಳಿಗೂ ನಮ್ಮ ಮನೆಯ
ಮುಂದಿನ ನಿಸರ್ಗದ ವ್ಯಾಪಾರಕ್ಕೂ ಬಹಳಷ್ಟು
ಸಾಮ್ಯತೆಯಿತ್ತು.
ಆದಕಾರಣ ತೇಜಸ್ವಿಯವರ
ಭಾಷೆಯನ್ನು ಅಲ್ಲಲ್ಲಿ ಬಳಸಿ ನಮ್ಮ
ಮನೆಯಂಗಳದ ಕಥೆಯನ್ನು ಹೇಳುತ್ತೇನೆ ಕೇಳಿ.
ವರ್ತುಳ,ವರ್ತುಳ,ವರ್ತುಳವಾಗಿ ಹದ್ದುಗಳ
ನೆರಳು ಧಡೀರನೆ ಮನೆಯ ಮುಂದೆಲ್ಲಾ ಬಿದ್ದು,
ಧಿಗ್ಗನೆ ಮನೆಯ ಗೋಡೆಯೇರಿ,ಆಗಸದಿಂದ ಜುಣುಗಿ
ಇಳಿದ ಅರೆಬರೆ ಬಿಸಿಲಿನಲ್ಲೇ ತನ್ನ ಮೇರೆಯನ್ನು ನಿರ್ದೇಶಿಸುತ್ತಿತ್ತು.ಮೇಲೆ,ಬಹುಮೇಲೆ ಒಂದೆರಡು ಗರುಡಗಳು ಹಾಯಾಗಿ ರೆಕ್ಕೆಯನ್ನು ಬಿಚ್ಚಿಕೊಂಡು ಸುತ್ತೀ ಸುತ್ತೀ ಸುತ್ತೀ ತೇಲುತ್ತಿತ್ತು.ಮಳೆಹುಳುಗಳು ಸುಮಾರು ಹದಿನೈದು ಅಡಿ
ಎತ್ತರದಲ್ಲಿ ಹಾರುವುದೇ ತಡ ಎಲ್ಲಿಂದಲೋ ಒಂದು ಹದ್ದು ಹಾರಿಬಂದು ಅಂತರಿಕ್ಷದಲ್ಲೇ ಫಳಾರ ಮಾಡುತ್ತಿತ್ತು.
ಕತ್ತಲು ತುಂಬಿದ್ದ ಶೂನ್ಯಬಿಲದ ಬಾಯೊಳಗಿನಿಂದ ಒಮ್ಮೆಲೆ ನಾಲ್ಕೈದು ಹುಳಗಳು
ಹೊರಹಾರಿದಂತೆ ಮೂರ್
ನಾಲ್ಕು ಗಿಡುಗಗಳೂ ಆಗಸದಿಂದ ತೇಲಿಬಂದು ಹುಳಗಳನ್ನು ಹಿಡಿದು
ತಿನ್ನುವ ಭರಾಟೆಯಲ್ಲಿ ಒಂದಕ್ಕೊಂದು ಢಿಕ್ಕಿ ಹೊಡೆಯುತ್ತವೇನೋ ಎಂದುಕೊಳ್ಳುವಷ್ಟರಲ್ಲಿ ದಿಕ್ಕು ಬದಲಿಸಿ ಗಾಳಿಯಲ್ಲಿ ಮೇಲೇರುತ್ತಿದ್ದವು.ಮಂದಗತಿಯಲ್ಲಿ ಹಾರುವ ಮಳೆಹುಳುಗಳನ್ನು ಹದ್ದುಗಳು ತಮ್ಮ
ಕೊಕ್ಕೆಯಂತಹ ಕಾಲುಗುರುಗಳ ನಡುವೆ ಅಮುಕಿ ಹಿಡಿದು ಹಾರುತ್ತಲೇ ಅಂತರಿಕ್ಷದಲ್ಲೇ ಗುಳಂ ಮಾಡುತ್ತಿದ್ದವು. ಈ ದುರಂತದ ಪ್ರತೀಕದಂತೆ ಮಳೆಹುಳುಗಳ ರೆಕ್ಕೆಗಳು ಮೆಲುಗಾಳಿಯಲ್ಲಿ ನವುರಾಗಿ ನರ್ತಿಸುತ್ತಾ,ಬಿಸಿಲಿಗೆ ಹೊಳೆಯುತ್ತಾ ನಿಧಾನವಾಗಿ ಭೂಸ್ಪರ್ಶಿಸುತ್ತಿದ್ದವು. ಅತ್ತ ವಿದ್ಯುತ್ ತಂತಿಯ ಮೇಲೆ ಮೈನಾಹಕ್ಕಿಗಳು,ಕಾಗೆಗಳು ಹದ್ದುಗಳ ಹಾರಾಟಕ್ಕೆ ಹೆದರಿ ಕುಳಿತು ಮಳೆಹುಳು ಮತ್ತು ಗೆದ್ದಲು ಹುಳುಗಳು ಬುಳುಬುಳು ಹೊರನುಗ್ಗುತ್ತಿದ್ದ ತೂತೊಂದರ ಕಡೆಗೇ ಆಸೆಗಣ್ಣಿನಿಂದ ನೋಡುತ್ತಿದ್ದವು.ಹದ್ದುಗಳು ಎತ್ತರದಲ್ಲಿ ತೇಲುತ್ತಿದ್ದಾಗ ತಗ್ಗಿನಲ್ಲಿ ಹಾರುವ ಮಳೆಹುಳುಗಳನ್ನು ಸ್ವಾಹಾ ಮಾಡಲು
ಈ ಹಕ್ಕಿಗಳಲ್ಲಿ ಪೈಪೋಟಿ ನಡೆಯುತ್ತಿತ್ತು.ತಮ್ಮ ಆಹಾರ ಇತರರ ಪಾಲಾದಿತೆಂದು ಒಂದನ್ನೊಂದು ಹೆದರಿಸಿ ಓಡಿಸುವ ಕಾರ್ಯದಲ್ಲಿ ಈ ಹಕ್ಕಿಗಳು ಮಗ್ನವಾಗಿದ್ದವು.
ನಮ್ಮ ಮನೆಯ ಮೇಲೆ ಹಾರುತ್ತಿದ್ದ ಹದ್ದುಗಳಿಗೆ ಮಳೆಹುಳುಗಳ ಭೋಜನ ಬೇಜಾರಾಯಿತೋ ಅಥವಾ
ಇನ್ನೇಲ್ಲಾದರೂ ಭೂರಿಭೋಜನದ ಸುಳಿವು ಸಿಕ್ಕಿತೋ ಅಂತೂ ನಮ್ಮ ಮನೆಯ ಮೇಲಿಂದ ಮರೆಯಾದವು.ಆಬಳಿಕ ಕಾಗೆ,ಮೈನಾ,ಮಿಂಚುಳ್ಳಿಗಳು ಮಳೆಹುಳುಗಳ ಶಿಖಾರಿಯಲ್ಲಿ ಮಗ್ನರಾದವು.ನಿಸರ್ಗದ ಆಹಾರ ಚಕ್ರದಲ್ಲಿ ಕೊಂಚ ತಡವಾದರೂ ಸಣ್ಣ ಹಕ್ಕಿಗಳಿಗೆ ಅವುಗಳ ಪಾಲು ಸಿಕ್ಕಿತ್ತು.*** ಅಶೋಕ ಉಚ್ಚಂಗಿ ***